ಬೆಂಗಳೂರು: ಬೆಂಗಳೂರು ಉತ್ತರ ಭಾಗದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಬಿಡಿಎಯಿಂದ ಸಿ.ಎ ನಿವೇಶನ ಹಂಚಿಕೆ ಪಡೆದಿದ್ದ ಬಿಬಿಎಂಪಿ, ಬರೋಬರಿ 12 ವರ್ಷದ ಬಳಿಕ 1.71 ಕೋಟಿ ರೂ. ಮೊತ್ತದ ಗುತ್ತಿಗೆ ಹಣ ಪಾವತಿಸಿ ಸ್ವತ್ತನ್ನು ತನ್ನ ಹೆಸರಿಗೆ ನೋಂದಾಯಿಸಿಕೊಳ್ಳಲು ಮುಂದಾಗಿದೆ.
ಎರಡು ದಶಕದ ಹಿಂದೆ ಬಿಡಿಎ ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆಯನ್ನು ರಚಿಸಿದ ವೇಳೆ ಆಸ್ಪತ್ರೆ ನಿರ್ಮಿಸಲು ಸಿ.ಎ ನಿವೇಶನವನ್ನು ನಿಗದಿ ಮಾಡಿತ್ತು. 2011ರಲ್ಲಿ ಇಲ್ಲಿನ 34 ಗುಂಟೆ ವಿಸ್ತೀರ್ಣದ ನಾಗರಿಕ ಸೌಲಭ್ಯದ ನಿವೇಶನ ಹಂಚಿಕೆ ಪತ್ರವನ್ನು ಬಿಬಿಎಂಪಿ ಪಡೆದುಕೊಂಡಿತ್ತು. ಆದರೆ, ಆರಂಭಿಕ ಠೇವಣಿ ಮೊತ್ತವಾದ 17.16 ಲಕ್ಷ ರೂ. ಪಾವತಿಸಿದ ನಂತರ 1.71 ಕೋಟಿ ರೂ. ಗುತ್ತಿಗೆ ಹಣವನ್ನು ಪಾವತಿಸದೆ ಪಾಲಿಕೆ ಸುಮ್ಮನಾಗಿತ್ತು. ಈ ವಿಚಾರವಾಗಿ ಬಿಡಿಎ ಹಲವು ಬಾರಿ ಪತ್ರ ಬರೆದರೂ ಪಾಲಿಕೆ ಮಾರುತ್ತರ ನೀಡದೆ ಮೌನ ವಹಿಸಿತ್ತು. ಆಸ್ಪತ್ರೆ ನಿರ್ಮಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಸಚಿವ ಎಸ್.ಟಿ.ಸೋಮಶೇಖರ್ ಅವರು 2022ರ ನ.24ರಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರೆ ಬರೆದು ಮನವಿ ಮಾಡಿದ್ದರು. ಈ ಪತ್ರಕ್ಕೂ ಸ್ಪಂದಿಸದ ಪಾಲಿಕೆ ನಿರ್ಲಕ್ಷ್ಯದ ಕುರಿತು ‘ವಿಜಯವಾಣಿ’ 2023ರ ಜು.23ರಂದು ‘12 ವರ್ಷ ಕಳೆದರೂ ಆಸ್ಪತ್ರೆ ನಿರ್ಮಿಸದ ಬಿಬಿಎಂಪಿ’ ಶಿರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.
ಆ ಸಂದರ್ಭದಲ್ಲಿ ಪಾಲಿಕೆಯ ವಿಶೇಷ ಆಯುಕ್ತ (ಆರೋಗ್ಯ) ಆಗಿದ್ದ ಡಾ. ತ್ರಿಲೋಕ್‌ಚಂದ್ರ ಅವರು 2023-24ನೇ ಆರ್ಥಿಕ ವರ್ಷದ ಅಂತ್ಯದೊಳಗೆ ಜಾಗವನ್ನು ಸ್ವಾಧೀನಕ್ಕೆ ಪಡೆಯುವ ಭರವಸೆ ನೀಡಿದ್ದರು. ಅದರಂತೆ ಸದ್ಯ ಮುಖ್ಯಮಂತ್ರಿಯವರ ಕಾರ್ಯದರ್ಶಿ ಆಗಿರುವ ಡಾ.ತ್ರಿಲೋಕ್‌ಚಂದ್ರ ಅವರು ಪಾಲಿಕೆ ಬಜೆಟ್ ಹಣದಲ್ಲೇ ಆಸ್ಪತ್ರೆ ಜಾಗಕ್ಕೆ ಪಾವತಿಸಬೇಕಿದ ಹಣವನ್ನು ಬಿಡಿಎಗೆ ಕೊಡಿಸುವಲ್ಲಿ ಮುತುವರ್ಜಿ ವಹಿಸಿದ್ದಾರೆ. ಇದರ ಪರಿಣಾಮ ಬಿಬಿಎಂಪಿ ಬುಧವಾರ (ಜ.17) 1.71 ಕೋಟಿ ರೂ. ಮೊತ್ತದ ಚೆಕ್‌ಅನ್ನು ಬಿಡಿಎಗೆ ಹಸ್ತಾಂತರಿಸಿದೆ.
ಶಾಸಕರ ಮನವಿಗೆ ಸ್ಪಂದನೆ:
ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಹಣಕಾಸಿನ ಕೊರತೆ ಕುರಿತು ಶಾಸಕ ಎಸ್.ಟಿ.ಸೋಮಶೇಖರ್ ಅವರು ಹಲವು ಬಾರಿ ಸಿಎಂ ಹಾಗೂ ಡಿಸಿಎಂ ಗಮನ ಸೆಳೆದಿದ್ದರು. ಇತ್ತೀಚಿಗೆ ಸಿಎಂ ಅವರನ್ನು ಖುದ್ದು ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆಗೆ ಮನವಿ ಅರ್ಪಿಸಿದ್ದ ವೇಳೆ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೂ ನೆರವಿನ ಭರವಸೆ ದೊರೆತಿತ್ತು. ಇದೀಗ ಬಿಬಿಎಂಪಿ ತನ್ನ ಕೈತಪ್ಪಿ ಹೋಗುತ್ತಿದ್ದ ಸಿ.ಎ ನಿವೇಶನವನ್ನು ತನ್ನ ಹೆಸರಿಗೆ ನೋಂದಾಯಿಸಿಕೊಳ್ಳಲು ದೊಡ್ಡ ಮೊತ್ತದ ಚೆಕ್‌ಅನ್ನು ಬಿಡಿಎಗೆ ಪಾವತಿಸಿರುವುದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಿದ್ದ ಅಡಚಣೆ ನಿವಾರಣೆಯಾದಂತಾಗಿದೆ.