ಆಸ್ತಿಗಾಗಿ ಹಸುಗೂಸನ್ನೇ ಕೊಂದ ಮಲತಾಯಿ

04
Published on

ಯಾದಗಿರಿ: ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆ ಎಂಬ ಕಾರಣದಿಂದ 5 ತಿಂಗಳ ಹಸುಗೂಸಿಗೆ ಪಾಪಿ ಮಲತಾಯಿಯೊಬ್ಬಳು ವಿಷ ಬೆರೆಸಿ ಕೊಲೆ ಮಾಡಿದ ಘಟನೆ ಜಿಲ್ಲೆಯ ವಡಿಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸಂಗೀತಾ (05) ಕೊಲೆಯಾದ ಹಸುಗೂಸು. ದೇವಮ್ಮ ಎಂಬಾಕೆ ಕೊಲೆ ಮಾಡಿದ ಆರೋಪಿ. ಗ್ರಾಮದ ಸಿದ್ದಪ್ಪ ಚಿಟ್ಟಗೇರಿ ಎಂಬಾತನಿಗೆ ಕಳೆದ 11 ವರ್ಷದ ಹಿಂದೆ ಶ್ರೀದೇವಿ ಎಂಬಾಕೆ ಜೊತೆ ಮದುವೆಯಾಗಿತ್ತು. ಆಕೆಗೆ ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ದೇವಮ್ಮ ಎಂಬಾಕೆಯನ್ನು ಕಳೆದ 5 ವರ್ಷದ ಹಿಂದೆ ಮದುವೆಯಾಗಿದ್ದ. ದೇವಮ್ಮಳಿಗೆ 4 ಜನ ಮಕ್ಕಳಿದ್ದಾರೆ. ದೇವಮ್ಮಳನ್ನ ಮದುವೆಯಾದ ನಂತರ ಶ್ರೀದೇವಿ ಗಂಡನ ಮನೆ ಬಿಟ್ಟು ತನ್ನ ತವರು ಮನೆಗೆ ಹೋಗಿದ್ದಾಳೆ. ಹಿರಿಯರ ರಾಜಿ ಸಂಧಾನದ ನಂತರ ಕಳೆದ ಮೂರು ವರ್ಷಗಳ ಹಿಂದೆ ಗಂಡನ ಮನೆಗೆ ವಾಪಸ್ ಆಗಿದ್ದಳು.

ಶ್ರೀದೇವಿಗೆ ಕಳೆದ 6 ತಿಂಗಳ ಹಿಂದೆ ಮುದ್ದಾದ ಹೆಣ್ಣುಮಗು ಜನಿಸಿತ್ತು. ಈ ಮಗು ಮುಂದೆ ತನ್ನ ಮಕ್ಕಳ ಆಸ್ತಿಯಲ್ಲಿ ಪಾಲು ಬೇಡಲಿದೆ ಎಂಬ ಕಾರಣಕ್ಕಾಗಿ ಕಳೆದ ಆ.30ರಂದು ಗ್ರಾಮದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೂಸಿಗೆ ಬಾಟಲ್ನಲ್ಲಿ ಹಾಲು ಕುಡಿಸುವುದಾಗಿ ಬಲವಂತವಾಗಿ ಕೋಣೆಯೊಳಗೆ ಎತ್ತಿಕೊಂಡು ಹೋಗಿದ್ದಾಳೆ. ಹಾಲಿನಲ್ಲಿ ಕ್ರಿಮಿನಾಶಕ ಬೆರಸಿ ಕೂಸಿಗೆ ಕುಡಿಸಿದ್ದಾಳೆ. ಇದಾದ ಮೂರು ಗಂಟೆ ನಂತರ ಮುಗುವಿನ ಬಾಯಲ್ಲಿ ನೊರೆ ಬಂದು ತೀರಿಕೊಂಡಿದೆ.

ಈ ಬಗ್ಗೆ ಶ್ರೀದೇವಿ ತವರು ಮನೆಯವರಿಗೆ ಅನುಮಾನ ಬಂದು ವಡಿಗೇರಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದಾಗ ತಾನೇ ವಿಷ ಬೆರೆಸಿದ ಬಗ್ಗೆ ಪಾಪಿ ದೇವಮ್ಮ ಬಾಯ್ಬಿಟ್ಟಿದ್ದಾಳೆ. ವಡಿಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net