

ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಕಾರ್ಮಿಕ ದಿನಾಚರಣೆ ಅಂಗವಾಗಿ ಗುರುವಾರ ನಗರದ ನ್ಯೂ ಶೇಷಾದ್ರಿ ಐಯ್ಯರ್ ರಸ್ತೆಯ ವಸತಿ ರಹಿತರ ಆಶ್ರಯ ಕೇಂದ್ರದ ನಿವಾಸಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಆಶ್ರಯ ಕೇಂದ್ರದಲ್ಲಿರುವ ಎಲ್ಲ ಪುರುಷರಿಗೂ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧ ನೀಡಲಾಯಿತು. ಸುಯೋಗ ಆಸ್ಪತ್ರೆಯ ಮುಖ್ಯಸ್ಥ ಡಾ.ಎಸ್.ಪಿ.ಯೋಗಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜತೆಗೆ ಸ್ವತಃ ತಾವೇ ಆರೋಗ್ಯ ತಪಾಸಣೆ ನಡೆಸಿ, ಔಷಧ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಕಾರ್ಮಿಕ ದಿನವು ಕಾರ್ಮಿಕರ ಸ್ಥಿತಿಗತಿ ಅವಲೋಕನಕ್ಕೆ ನಮ್ಮನ್ನು ಪ್ರೇರೇಪಿಸಬೇಕು. ಸಂಕಷ್ಟಕ್ಕೆ ದೂಡುತ್ತಿರುವ ಸಂಗತಿಗಳ ನಿವಾರಣೆಗೆ ಸಿದ್ಧಗೊಳಿಸಬೇಕು. ಎಲ್ಲರಿಗೂ ಮನೆ, ಶಿಕ್ಷಣ, ಆರೋಗ್ಯ ಇರಬೇಕು. ಇದು ಮೇ ದಿನಾಚರಣೆ ಮಹತ್ವವನ್ನು ಹೇಳುತ್ತದೆ. ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಲು ನಾವು ಸದಾ ಸಿದ್ಧ. ಕಾರ್ಮಿಕರಿಗೆ ಇಂತಹ ಆರೋಗ್ಯ ತಪಾಸಣೆ ಶಿಬಿರಗಳು ಅಗತ್ಯ ಇದೆ ಎಂದು ಹೇಳಿದರು.
ವೇದಿಕೆ ಗೌರವಾಧ್ಯಕ್ಷ ಎಚ್.ಕೆ.ರಾಮು ಮಾತನಾಡಿ, ಇಲ್ಲಿನ ನಿವಾಸಿಗಳು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಜನರ ನಡುವೆ ಕಾರ್ಮಿಕ ದಿನ ಆಚರಿಸುವುದು ನಿಜಕ್ಕೂ ಅರ್ಥಪೂರ್ಣ. ಇಲ್ಲಿನ ಜನರೊಂದಿಗೆ ಮಾತನಾಡಿದಾಗ ಒಬ್ಬೊಬ್ಬರದೂ ಒಂದೊಂದು ರೀತಿಯ ಸಮಸ್ಯೆಗಳು ಇವೆ. ಕೆಲವರ ಸಮಸ್ಯೆಗಳಿಗೆ ವೇದಿಕೆ ವತಿಯಿಂದ ಸ್ಪಂದಿಸಲಾಗುವುದು ಎಂದು ಹೇಳಿದರು. ಗೋಪಾಲಗೌಡ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಸುಶ್ರುತ್ ಗೌಡ, ವೇದಿಕೆ ರಾಜ್ಯಾಧ್ಯಕ್ಷೆ ಎಚ್.ಆರ್.ಯಮುನಾ ಮಾತನಾಡಿದರು. ವೇದಿಕೆ ನಿರ್ದೇಶಕ ಡಾ.ಎಂ.ಬಿ. ಮಂಜೇಗೌಡ, ಪ್ರಜ್ಞಾ ಟ್ರಸ್ಟ್ ಅಧ್ಯಕ್ಷ ಸೋಸಲೆ ಸಿದ್ದರಾಜು ಇತರರಿದ್ದರು.