ಆಲ್ದೂರಿನಲ್ಲಿ ಸುಗ್ಗಿಹಬ್ಬ ಸಂಭ್ರಮ

19ald 1 jatre
ಆಲ್ದೂರಿನಲ್ಲಿ ಭಕ್ತರು ಮಳ್ಳೂರಮ್ಮ ದೇವಿಯ ಅಡ್ಡೆಗಳನ್ನು ಹೊತ್ತು ಸಾಗಿದರು.
Published on

ಆಲ್ದೂರು: ಹಳೇ ಆಲ್ದೂರು ಗ್ರಾಮದ ಸುಗ್ಗಿಹಬ್ಬಕ್ಕೆ ಚಾಲನೆ ದೊರೆಯಿತು. ಬುಧವಾರ ಗ್ರಾಮದಿಂದ ಆಲ್ದೂರು ಪಟ್ಟಣಕ್ಕೆ ಮಳ್ಳೂರಮ್ಮ ದೇವಿಯ ದೇವರ ಅಡ್ಡೆಗಳು ಆಗಮಿಸಿದ್ದರಿಂದ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಳ್ಳೂರಮ್ಮ ದೇವಿಯ ಸುಗ್ಗಿಹಬ್ಬದ ಆರಂಭದೊಂದಿಗೆ ಆಲ್ದೂರು ಸುತ್ತಮುತ್ತಲಿನ ಗ್ರಾಮಗಳ ಸುಗ್ಗಿ ಹಬ್ಬಕ್ಕೆ ಚಾಲನೆ ದೊರೆಯುತ್ತದೆ. ಬುಧವಾರ ಬೆಳಗ್ಗೆ ಹಳೇ ಆಲ್ದೂರು ಗ್ರಾಮದಿಂದ ಮಳ್ಳೂರಮ್ಮನ ದೇವಿಯ ಚಿಕ್ಕಮ್ಮ ಹಾಗೂ ದೊಡ್ಡಮ್ಮನ ಅಡ್ಡೆಗಳನ್ನು ನೊಜೆಪೇಟೆ, ಪೇಟೆ ಕಾಲನಿ, ಮೇದರ ಬೀದಿ ಮೂಲಕ ಹೊತ್ತು ಸಾಗಿದ ಭಕ್ತರು ಗಾಳಿಗಂಡಿಯ ಮಳ್ಳೂರಮ್ಮನ ಕಟ್ಟೆಯಲ್ಲಿ ಗದ್ದುಗೆ ಮಾಡಲಾಯಿತು. ಗುಡದ್ದೂರು, ವಗರ್ ರಸ್ತೆ, ಗಾಳಿಗಂಡಿ, ಹವ್ವಳ್ಳಿ ಗ್ರಾಮದ ಜನ ಮಳ್ಳೂರಮ್ಮನ ಕಟ್ಟೆಯಲ್ಲಿ ಹಣ್ಣುಕಾಯಿ ಸಮರ್ಪಿಸಿದರು.

ಮಧ್ಯಾಹ್ನ ದೇವರ ಅಡ್ಡೆಗಳನ್ನು ಹೊತ್ತು ಭಕ್ತರು ಮುಖ್ಯರಸ್ತೆಯಲ್ಲಿ ವಾದ್ಯಗಳೊಂದಿಗೆ ಆಗಮಿಸಿದರು. ಅಂಗಡಿ ಮಾಲೀಕರು ಅಂಗಡಿಗಳ ಮುಂದೆ ಹಣ್ಣುಕಾಯಿ ಸಮರ್ಪಿಸಿದರು. ಭಕ್ತರು ಮನೆಯ ಮುಂದೆ ರಂಗೋಲಿ ಹಾಕಿ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ದೇವರ ಅಡ್ಡೆಗಳನ್ನು ಮಹಾಗಣಪತಿ ದೇವಾಲಯದಲ್ಲಿ ಗದ್ದುಗೆ ಮಾಡಿ ಪೂಜೆ ಸಲ್ಲಿಸಲಾಯಿತು. ದೊಡ್ಡಮಾಗರವಳ್ಳಿ, ಚಿಕ್ಕಮಾಗರವಳ್ಳಿ, ಆಲ್ದೂರು ಸುತ್ತಮುತ್ತಲಿನ ಗ್ರಾಮದ ಜನರು ಹಣ್ಣುಕಾಯಿ ಸಮರ್ಪಿಸಿದರು. ಪಟ್ಟಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಶ್ರೀ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯಿಂದ ದೇವಸ್ಥಾನದ ಅಧ್ಯಕ್ಷ ಸಿ.ಸುರೇಶ್, ಹಳೇ ಆಲ್ದೂರು ಗ್ರಾಮದ ನಾಡಪಟೇಲ್ ವೀರೇಂದ್ರ (ಭಾಸ್ಕರ್) ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net