ಆರ್ಥಿಕ ವಹಿವಾಟಿನ ಮೇಲೆ ನಿಗಾ

Published on

ಬೆಳಗಾವಿ: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯಲ್ಲಿ ಆರ್ಥಿಕ ವ್ಯವಹಾರದ ಮೇಲೆ ತೀವ್ರ ನಿಗಾ ವಹಿಸಲಾಗಿದ್ದು, ಒಬ್ಬ ಸಾಮಾನ್ಯ ವ್ಯಕ್ತಿ 50 ಸಾವಿರ ರೂ.ವರೆಗೆ ನಗದು ತೆಗೆದುಕೊಂಡು ಹೋಗಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್, ಸೊಸೈಟಿ ಸೇರಿ ವಿವಿಧ ಹಣಕಾಸಿನ ಸಂಸ್ಥೆಗಳು ತಮ್ಮ ದಿನದ ವಹಿವಾಟು ಕುರಿತು ಮಾಹಿತಿ ಹಂಚಿಕೆ ಮಾಡಿಕೊಳ್ಳಬೇಕು. ಒಬ್ಬ ವ್ಯಕ್ತಿ ಬ್ಯಾಂಕ್ ಖಾತೆಯಿಂದ 2 ಲಕ್ಷ ರೂ. ವರೆಗೆ ಹಿಂಪಡೆಯುವ (ಡ್ರಾ) ಮಿತಿ ಹಾಕಲಾಗಿದೆ. ಬ್ಯಾಂಕ್ ಮತ್ತು ಆನ್‌ಲೈನ್ ಮೂಲಕ ದಿನಕ್ಕೆ 10 ಲಕ್ಷ ರೂ. ಮೇಲ್ಪಟ್ಟ ವಹಿವಾಟು ನಡೆಸುವವರ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್‌ಗಳು, ಸೊಸೈಟಿಗಳು ಸೇರಿ ಆರ್ಥಿಕ ಸಂಸ್ಥೆಗಳು ತಮ್ಮ ದಿನನಿತ್ಯ ಆರ್ಥಿಕ ವಹಿವಾಟು ಕುರಿತು ಸಮಗ್ರ ಮಾಹಿತಿಯನ್ನು ಚುನಾವಣೆ ಆಯೋಗಕ್ಕೆ ನೀಡಬೇಕು. ನಿತ್ಯ ಲಕ್ಷಾಂತರ ರೂ. ಠೇವಣಿ ಇಡುವವರು ಮತ್ತು ಡ್ರಾ ಮಾಡುವವರ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಅದಕ್ಕಾಗಿ ಇಬ್ಬರು ತೆರಿಗೆ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಕ್ರಮ ವಹಿವಾಟಿಗೆ ಅವಕಾಶ ಕಲ್ಪಿಸಿಕೊಡುವುದಿಲ್ಲ ಎಂದು ತಿಳಿಸಿದರು.

ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 4,434 ಮತಗಟ್ಟೆ ಸ್ಥಾಪಿಸಲಾಗಿದೆ. ಈ ಪೈಕಿ 688 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಅಲ್ಲದೆ, ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಬರೋಬ್ಬರಿ 61 ಚೆಕ್‌ಪೋಸ್ಟ್ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಿಸಲಾಗುವುದು. ಈಗಾಗಲೇ ಚುನಾವಣೆ ಕರ್ತವ್ಯಕ್ಕೆ 1,002 ಸಿಬ್ಬಂದಿ ನಿಯೋಜನೆ ಮಾಡಿ ಆದೇಶಿಸಲಾಗಿದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದು, ಮಾ.15 ರಿಂದ 28ರವರೆಗೆ 61 ಚೆಕ್‌ಪೋಸ್ಟ್‌ಗಳ ವ್ಯಾಪ್ತಿಯಲ್ಲಿ 1.07 ಕೋಟಿ ರೂ. ನಗದು, 22.82 ಸಾವಿರ ಲೀಟರ್ ಮದ್ಯ, 33.91 ಕೆಜಿ ಮಾದಕ ವಸ್ತು, 9.39 ಕೆಜಿ ಬೆಳ್ಳಿ ಹಾಗೂ 6,243 ಕೆಜಿ ಇತರ ವಸ್ತು ಜಪ್ತಿ ಮಾಡಿಕೊಳ್ಳಲಾಗಿದೆ. ಕಾಗವಾಡ ಚೆಕ್‌ಪೋಸ್ಟ್‌ನಲ್ಲಿ 78 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಸಂಬಂಧಿಸಿದವರ ಮೇಲೆ ಕೇಸ್ ದಾಖಲಿಸಿ ಕ್ರಮ ಜರುಗಿಸಲಾಗಿದೆ ಎಂದು ವಿವರಿಸಿದರು. ಮಹಾನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ, ಜಿಪಂ ಸಿಇಒ ಹರ್ಷಲ್ ಭೋಯರ್, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ ಇತರರಿದ್ದರು.

ಅಕ್ರಮ ಕಡಿವಾಣಕ್ಕೆ ಸಿಸಿಟಿವಿ ಅಳವಡಿಕೆ: ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಗೂ ಮತದಾರರಿಗೆ ವಿವಿಧ ರೀತಿ ಆಮಿಷ ಒಡ್ಡುವುದನ್ನು ತಡೆಗಟ್ಟಲು ನಗರ, ಗ್ರಾಮೀಣ ಪ್ರದೇಶಗಳಲ್ಲಿನ ಮದ್ಯದ ಅಂಗಡಿಗಳು, ಪೆಟ್ರೋಲ್ ಪಂಪ್‌ಗಳಲ್ಲಿ ಸಿಸಿಟಿವಿ ಅಳವಡಿಸಲಾಗುತ್ತಿದೆ. ಜಿಲ್ಲೆಗೆ ಚುನಾವಣೆ ಭದ್ರತೆಗಾಗಿ ಎಂಟು ಅರೆಸೇನಾ ಪಡೆಗಳು ಬರುತ್ತಿವೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 27 ಜನರನ್ನು ಗಡಿಪಾರು ಮಾಡಲಾಗಿದೆ. ಈ ಬಾರಿ ಚುನಾವಣೆಯಲ್ಲಿ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಮತದಾನ ಮಾಡಲಿದ್ದಾರೆ ಎಂದು ಎಸ್‌ಪಿ ಡಾ.ಸಂಜೀವ ಪಾಟೀಲ ತಿಳಿಸಿದರು.

ಮದುವೆ, ಗೃಹಪ್ರವೇಶ ಕಾರ್ಯಕ್ರಮಗಳಿಗೆ ಯಾವುದೇ ರೀತಿ ನಿರ್ಬಂಧ ಇಲ್ಲ. ಕಾರ್ಯಕ್ರಮಗಳಲ್ಲಿ ಅಭ್ಯರ್ಥಿಗಳು ಭಾಗವಹಿಸಬಹುದು. ಆದರೆ, ಮತಯಾಚನೆ, ಪಕ್ಷದ ಚಿಹ್ನೆ, ಬಾವುಟ ಪ್ರದರ್ಶಿಸುವಂತಿಲ್ಲ. ಏಪ್ರಿಲ್ 10ರ ವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗಾವಿ ಆರ್‌ಪಿಡಿ ಕಾಲೇಜಿನಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ.
ನಿತೇಶ ಪಾಟೀಲ, ಜಿಲ್ಲಾ ಚುನಾವಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net