

ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸ್ತ್ರೀಯರು ಹಾಗೂ ಸ್ತ್ರೀ ಶಕ್ತಿ ಸಂಘಗಳ ಪಾತ್ರ ಬಹಳ ದೊಡ್ಡದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಅಯೋಜಿಸಿರುವ ಮಹಿಳಾ ಉದ್ಯಮಿಗಳಿಂದ ತಯಾರಿಸಲಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಪುರುಷರಿಗೆ ಸರಿಸಮನಾಗಿ ಹಕ್ಕುಗಳನ್ನು ಸಂವಿಧಾನ ಮಹಿಳೆಯರಿಗೆ ನೀಡಿದೆ. ಆದರೆ, ಇಂದಿಗೂ ಸಂಪೂರ್ಣವಾಗಿ ಆಶಯ ಜಾರಿಯಾಗಿಲ್ಲ. ಹೀಗಾಗಿ ಸಂವಿಧಾನದ ಆಶಯದಂತೆ ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹಲವು ಯೋಜನೆ ರೂಪಿಸಿದೆ ಎಂದರು.
ದೇಶದ ಆರ್ಥಿಕತೆ ಬೆಳವಣಿಯಲ್ಲಿ ಸಣ್ಣ, ಸೂಕ್ಷ್ಮ ಕೈಗಾರಿಕೆಗಳು ಪ್ರಮುಖ ಪಾತ್ರವಹಿಸಿವೆ. ಆದರೆ, ಕೋವಿಡ್ ನಂತರದ 80 ಸಾವಿರ ಎಂಎಸ್‌ಎಂಗಳು ಮುಚ್ಚಿ ಹೋಗಿವೆ. ಇದರಿಂದ ಆರ್ಥಿಕತೆಯ ಬೆನ್ನಲೆಬು ಕುಸಿದು ಬಿದ್ದಿತು. ಈಗ ಮತ್ತೆ ಸಣ್ಣ, ಗುಡಿ ಕೈಗಾರಿಗಳು ಬೆಳವಣಿಗೆ ರಾಜ್ಯ ಸರ್ಕಾರ ರೂಪುರೇಷೆಗಳನ್ನು ರೂಪಿಸಿ ಅವಕಾಶಗಳನ್ನು ಒದಗಿಸುವ ವ್ಯವಸ್ಥೆ ಮಾಡುತ್ತಿದೆ ಎಂದರು.
ಸೂಕ್ತ ಅವಕಾಶ ಒದಗಿಸಿ: ಗ್ರಾಮೀಣಾಭಿವೃದ್ಧಿ ಸಚಿವನಾಗಿದ್ದ ಸಂದರ್ಭದಲ್ಲಿ ಗುಡಿ ಕೈಗಾರಿಕೆಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆ ರೂಪಿಸಿದ್ದೆ. ಇದರ ಜತೆಗೆ ಕಡಕೊಳದ ಬಳಿ 250 ಎಕರೆ ಜಮೀನನ್ನು ಮಹಿಳಾ ಉದ್ಯಮಕ್ಕಾಗಿ ನೀಡಲಾಗಿದೆ. ಮಹಿಳೆಯರಿಗೆ ಸೂಕ್ತ ಅವಕಾಶಗಳನ್ನು ಒದಗಿಸಿದರೆ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಡಾ.ಎಚ್.ಸಿ.ಮಹದೇವಪ್ಪ ವಿವರಿಸಿದರು.
ಸದುಪಯೋಗಪಡಿಸಿಕೊಳ್ಳಿ: ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಮಾತನಾಡಿ, ಒಂದು ದೇಶದ ಪ್ರಗತಿಯು ಅಲ್ಲಿನ ಮಹಿಳೆಯರ ಅಭಿವೃದ್ಧಿಯ ಮೇಲೆ ನಿರ್ಧರಿಸಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ, ಮಹಿಳೆಯರಿಗೂ ಇಂದಿಗೂ ಎರಡನೇ ದರ್ಜೆ ಪ್ರಜೆಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳಾ ಸಬಲೀಕರಣ ಉದ್ದೇಶದಿಂದಲೇ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಕಾಶಿಯಾದ ಮೂಲಕ ಶೇ.5ರಷ್ಟು ಬಡ್ಡಿದರದಲ್ಲಿ ಕೋಟ್ಯಂತರ ರೂ. ಸಾಲ ನೀಡುತ್ತಿದೆ. ಮಹಿಳೆಯರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ಉಪಾಧ್ಯಕ್ಷ ಬಿ.ಆರ್.ಗಣೇಶ್ ರಾವ್, ಜಂಟಿ ಕಾರ್ಯದರ್ಶಿ ಎನ್.ಸತೀಶ್, ಜಂಟಿ ಕಾರ್ಯದರ್ಶಿ ಜೆ.ಎಸ್.ಬಾಬು, ಖಜಾಂಚಿ ಎಚ್.ಮಂಜುನಾಥ್, ಗ್ರಾಮೀಣಾಭಿವೃದ್ಧಿ ಉಪ ಸಮಿತಿ ಅಧ್ಯಕ್ಷ ಸಿ.ಎಂ.ಸುಬ್ರಮಣಿಯನ್, ಮಹಿಳಾ ಸಬಲೀಕರಣ ಸಮಿತಿ ಅಧ್ಯಕ್ಷರಾದ ಎಸ್.ಲತಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಕೆ.ಶಿವಲಿಂಗಯ್ಯ, ಕೆಐಡಿಬಿ ಜಿಲ್ಲಾಧ್ಯಕ್ಷ ಲಿಂಗರಾಜು ಇತರರಿದ್ದರು.