ಆರೋಗ್ಯಕರ ಜೀವನ ಉತ್ತಮ ದೃಷ್ಟಿಗೆ ದಾರಿ

CTD EYA DOCTER ----
????????????
Published on

ಚಿತ್ರದುರ್ಗ: ಆರೋಗ್ಯಕರ ಜೀವನ ಉತ್ತಮ ದೃಷ್ಟಿಗೆ ದಾರಿಯಾಗಲಿದೆ ಎಂದು ಜಿಲ್ಲಾಸ್ಪತ್ರೆ ನೇತ್ರ ತಜ್ಞ ಡಾ.ಬಿ.ಜಿ. ಪ್ರದೀಪ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಕಚೇರಿಯಿಂದ ನಗರದ ಕರ್ನಾಟಕ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟದ ನೌಕರರಿಗೆ ಬುಧವಾರ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ರಕ್ತದೊತ್ತಡ, ಮಧುಮೇಹ ಪರೀಕ್ಷಾ ಶಿಬಿರದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಉತ್ತಮ ಆಹಾರ ಕ್ರಮಗಳನ್ನು ಜನ ಮರೆತಿದ್ದಾರೆ. ಆರೋಗ್ಯಕರ ಚಟುವಟಿಕೆಗಳಿಂದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳು ಹೆಚ್ಚುತ್ತಿದೆ. ಇವು ದೃಷ್ಟಿದೋಷ ಮತ್ತು ಅಂಧತ್ವಕ್ಕೆ ಕಾರಣವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದೆ 40 ವರ್ಷ ಮೀರಿದ ನಂತರ ಕನ್ನಡಕ ಧರಿಸುವಂಥ ಸನ್ನಿವೇಶ ಎದುರಾಗುತ್ತಿತ್ತು. ಆದರೆ, ಈಗ ಯಾವ ವಯಸ್ಸಿಗಾದರೂ ಕನ್ನಡಕವನ್ನು ಧರಿಸಬೇಕಾಗಿ ಬರಬಹುದು. ಪೋಷಕಾಂಶಯುಕ್ತ ತರಕಾರಿ, ವಿಟಮಿನ್-ಎ ಅಂಶ ಇರುವ ಹಣ್ಣು, ತರಕಾರಿ ಸೇವನೆ ಉತ್ತಮ ದೃಷ್ಟಿಗೆ ನೆರವಾಗುತ್ತದೆ ಎಂದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ. ಶ್ರೀನಿವಾಸಮೂರ್ತಿ ಮಾತನಾಡಿ,ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಮೊಳಕೆ ಕಾಳುಗಳಿಂದ ತಯಾರಿಸುವ ಆಹಾರ ಪದಾರ್ಥ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಿತ್ಯ ಯೋಗ, ಧ್ಯಾನ, ವ್ಯಾಯಾಮ, ವಾಕಿಂಗ್‌ನಂಥ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಕೆಒಎಫ್ ವ್ಯವಸ್ಥಾಪಕ ನಿರ್ದೇಶಕ ಡಾ. ಜೈಕೃಷ್ಣ, ಜಿಲ್ಲಾಸ್ಪತ್ರೆ ನೇತ್ರಾಧಿಕಾರಿ ಕೆ.ಸಿ. ರಾಮು, ಡಾ. ಐಶ್ವರ್ಯ,ನೇಹಾ, ಗೀತಾ, ಅನಿಲ್, ಐಸಿಟಿಸಿ ವಿಭಾಗದ ನಾಗರಾಜ್, ಲೋಕೇಶ್, ಶುಶ್ರೂಷಾಧಿಕಾರಿ ಸ್ವಾತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net