ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯವಶ್ಯಕ

29
Published on

ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಂದು ಅಂಗಾಂಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಯೋಗದಿಂದ ಎಲ್ಲ ಅಂಗಾಂಗಗಳಿಗೂ ಕಸರತ್ತು ಆಗುತ್ತದೆ. ಯೋಗಗಳಲ್ಲಿ ಅಷ್ಟಾಂಗ ಯೋಗ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.

ಚೈತನ್ಯ ಯೋಗ ಎಜುಕೇಷನ್ ಅಂಡ್ ರಿಸರ್ಚ್ ಫೌಂಡೇಷನ್ ತನ್ನ 25ನೇ ವಾರ್ಷಿಕೋತ್ಸವ ಅಂಗವಾಗಿ ನಗರದ ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್‌ಶಿಪ್ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಆರೋಗ್ಯಕ್ಕೆ ದೈಹಿಕ ಕಸರತ್ತು, ವಾಯುವಿಹಾರದ ಜತೆಗೆ ಆಹಾರ ಕೂಡ ಮುಖ್ಯವಾಗುತ್ತದೆ. ಮೈಸೂರು ಯೋಗ ನಗರಿಯಾಗಿ ಹೆಸರು ಮಾಡಿದೆ. ಇದಕ್ಕೆ ಕಾರಣರಾದ ಬಿಕೆಎಸ್ ಅಯ್ಯಂಗಾರ್,ಕೃಷ್ಣಮಾಚಾರ್ಯರನ್ನು ಸದಾ ಸ್ಮರಿಸಬೇಕು ಎಂದು ಅವರು ಹೇಳಿದರು.

ಇದೇ ಸಮಾರಂಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರ ಟ್ರಸ್ಟ್ ಸಂಸ್ಥಾಪಕ ಬಿ. ಶಾಂತಾರಾಂ, ಮೈಸೂರು ಅಕಾಡೆಮಿ ಆಫ್ ಯೋಗ ಸಂಸ್ಥಾಪಕ ಎಂ.ಎಸ್.ರಮೇಶ್ ಕುಮಾರ್, ಅವರಿಗೆ ಯೋಗ ಚೈತನ್ಯ, ಮೆಡಿವೇವ್ ಗರ್ಭಧಾರಣಾ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಿ. ಶರತ್ ಕುಮಾರ್ ಅವರಿಗೆ ವೈದ್ಯ ಚೈತನ್ಯ, ಚಿತ್ರ ಕಲಾವಿದ ಆರ್. ರವಿರಾಜ್ ಅವರಿಗೆ ಚಿತ್ರಕಲಾ ಚೈತನ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ನಿವೃತ್ತ ಸದಸ್ಯ ಎಚ್.ಎಂ. ಮಂಜುನಾಥ್, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಬಿ. ಲಕ್ಷ್ಮೀನಾರಾಯಣ ಶೆಣೈ, ಸರ್ಕಾರಿ ಆಯುರ್ವೇದ ಆಸ್ಪತ್ರೆ ಸ್ಥಾಯಿ ವೈದ್ಯಾಧಿಕಾರಿ ಡಾ.ಶಶಿರೇಖಾ, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ವಿಜಯವಾಣಿ ಮೈಸೂರು ಆವೃತ್ತಿಯ ಮುಖ್ಯಸ್ಥ ಎಂ.ಆರ್. ಸತ್ಯನಾರಾಯಣ, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಮೈಸೂರು ಯೋಗ ಒಕ್ಕೂಟದ ಕಾರ್ಯಾಧ್ಯಕ್ಷ ಎಂ.ಎಸ್. ಶಿವಪ್ರಕಾಶ್, ಪ್ರಧಾನ ಕಾರ್ಯದರ್ಶಿ ಯೋಗ ಕುಮಾರ್, ಚೈತನ್ಯ ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಪಿ. ಮೂರ್ತಿ ಇದ್ದರು.

ಉದ್ಘಾಟನೆ: ಇದಕ್ಕೂ ಮುನ್ನ ಯೋಗಾಸನ ಸ್ಪರ್ಧೆಯನ್ನು ಶಾಸಕ ಜಿ.ಟಿ.ದೇವೇಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇತ್ತಿಚಿನ ದಿನಗಳಲ್ಲಿ ಕಲುಷಿತ ನೀರು, ಆಹಾರ ಸೇವನೆ, ವಾತಾವರಣದ ಏರುಪೇರಿನಿಂದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಯೋಗಾಭ್ಯಾಸ ಕಲಿತರೆ ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಲು ಮನುಷ್ಯನಿಗೆ ಯೋಗ ಮತ್ತು ಧ್ಯಾನ ಅವಶ್ಯಕವಾಗಿದೆ. ಮೈಸೂರಿನಲ್ಲಿ ಹಿಂದೆ ಕೆಲವೇ ಯೋಗ ಶಾಲೆಗಳು ಇದ್ದವು. ರಾಮಕೃಷ್ಣ ಶಾಲೆಯಲ್ಲಿ ಮಾತ್ರ ಯೋಗ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಈಗ ನಗರದಲ್ಲಿ ಅನೇಕ ಕೇಂದ್ರಗಳು ಯೋಗ ಶಿಕ್ಷಣ ನೀಡುತ್ತಿರುವುದರಿಂದ ಯುವಕರು ಮತ್ತು ಹಿರಿಯರು ಭಾಗವಹಿಸುತ್ತಿರುವುದು ಸಂತೋಷದ ವಿಷಯ ಎಂದರು.

ರಾಮಕೃಷ್ಣ ಆಶ್ರಮದ ಸಂಚಾಲಕರಾದ ಮಹಾಮೇಧಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಕಸಾಪ ಜಿಲ್ಲಾ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಆಯುರ್ವೇದ ತಜ್ಞ ಡಾ.ಎ.ಎಸ್. ಚಂದ್ರಶೇಖರ್, ಸರ್ಕಾರಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್.ರಾಧಾಕೃಷ್ಣನ್ ರಾಮರಾವ್, ನಿವೃತ್ತ ದೈಹಿಕ ಮತ್ತು ಯೋಗ ಶಿಕ್ಷಕ ಎನ್. ರಾಮಾ ಜೋಯಿಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net