ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸಮನ್ಸ್ ನೀಡಿದ ಲೋಕಾಯುಕ್ತ

lokayuktha
Published on

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಲೋಕಾಯುಕ್ತ ಸಂಸ್ಥೆಯು ಸಮನ್ಸ್ ಜಾರಿ ಮಾಡಿದೆ.

ನಗರದ ಕೆ.ಸಿ.ಜನರಲ್ ಆಸ್ಪತ್ರೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ವೇಳೆ ಮೂಲಭೂತ ಸೌಕರ್ಯ ಸೇರಿ ಹಲವು ಲೋಪದೋಷಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಜೂ. ೨೩ರಂದು ಹಾಜರಾಗಿ ನಿಗದಿತ ಅವಧಿಯಲ್ಲಿ ಮಾಹಿತಿ ಒದಗಿಸಲು ವಿಫಲವಾಗಿರುವುದಕ್ಕೆ ಕಾರಣ ಮತ್ತು ಕೈಗೊಂಡಿರುವ ಕ್ರಮಗಳ ವಿಸ್ತೃತ ವರದಿ ನೀಡುವಂತೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಲೋಕಾಯುಕ್ತ ಸಂಸ್ಥೆಯು ಸಮನ್ಸ್ ನೀಡಿದೆ.

ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರು ಜೂ.೨೩ರಂದು ಖುದ್ದು ಹಾಜರಾಗಿ ಮಾಹಿತಿ ನೀಡುವಂತೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಸೂಚಿಸಿದ್ದಾರೆ. ಲೋಕಾಯುಕ್ತರು, ಉಪಲೋಕಾಯುಕ್ತರು ಸೇರಿ ಇತರೆ ಸಿಬ್ಬಂದಿ ಕೆ.ಸಿ.ಜನರಲ್ ಆಸ್ಪತ್ರೆಯ ಅವ್ಯವಸ್ಥೆ ಕುರಿತು ಬಂದ ಮಾಹಿತಿ ಮೇರೆಗೆ ಅನಿರೀಕ್ಷಿತ ಭೇಟಿ ನೀಡಿದ್ದರು. ಈ ವೇಳೆ ಆಸ್ಪತ್ರೆಯ ಔಷಧಾಲಯದಲ್ಲಿ ಕೆಲವೊಂದು ಜೀವರಕ್ಷಕ ಔಷಧಿಗಳ ಅಲಭ್ಯತೆ, ಸಮಯಕ್ಕೆ ಸರಿಯಾಗಿ ವೈದ್ಯರು ಮತ್ತು ಸಿಬ್ಬಂದಿ ಹಾಜರಾಗದಿರುವುದು, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದಿರುವುದು ಸೇರಿದಂತೆ ಹಲವು ಲೋಪದೋಷಗಳನ್ನು ಪತ್ತೆ ಹಚ್ಚಲಾಗಿತ್ತು.

ಅನಿರೀಕ್ಷಿತ ಭೇಟಿ ವೇಳೆ ಗಂಭೀರ ಸ್ವರೂಪದ ಆಪಾದನೆಗಳು ಸಹ ಕಂಡುಬಂದಿದ್ದವು. ಈ ಸಂಬಂಧ ಯಾವುದಾದರೂ ಆಕ್ಷೇಪಣೆಗಳಿದ್ದರೆ ಮತ್ತು ಅವ್ಯವಸ್ಥೆಗಳನ್ನು ಸರಿಪಡಿಸಿರುವ ಕುರಿತು ವರದಿ ನೀಡುವಂತೆ ಸೂಚಿಸಲಾಗಿತ್ತು. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಗ್ಯ ಇಲಾಖೆಯಿಂದ ಲೋಕಾಯುಕ್ತರ ನೊಟೀಸ್‌ಗೆ ಯಾವುದೇ ಉತ್ತರ ಬಾರದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತರು ಇದೀಗ ಸಮನ್ಸ್ ಜಾರಿಗೊಳಿಸಿದ್ದು, ಜೂ.೨೩ರಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರು ಹಾಜರಾಗಿ ವರದಿ ನೀಡುವುದರ ಜತೆಗೆ ಸಕಾಲದಲ್ಲಿ ಮಾಹಿತಿ ಒದಗಿಸಲು ವಿಫಲವಾಗಿರುವುದಕ್ಕೆ ಕಾರಣ ನೀಡುವಂತೆ ಸೂಚಿಸಲಾಗಿದೆ. ಒಂದು ವೇಳೆ ಈ ಸಮನ್ಸ್‌ಗೂ ಅವರು ಪ್ರತಿಕ್ರಿಯಿಸದಿದ್ದಲ್ಲಿ ಅವರಿಗೆ ವಾರೆಂಟ್ ನೀಡುವುದು ಅನಿವಾರ್ಯ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net