

ಕಡೂರು: ಮನುಷ್ಯ ಎಷ್ಟೇ ಹಣ ಸಂಪಾದನೆ ಮಾಡಿದ್ದರೂ ಸಹ ಆರೋಗ್ಯವಂತನಾಗಿದ್ದರೆ ಮಾತ್ರ ಎಲ್ಲ ರೀತಿಯ ಸುಖವನ್ನು ಪಡೆಯಲು ಸಾಧ್ಯ ಎಂದು ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಅಣ್ಣೀಗೆರೆ ಗ್ರಾಮದಲ್ಲಿ ಭಾನುವಾರ ನಡೆದ ಯಶಸ್ವಿನಿ ಯೋಗ ಶಿಬಿರ ಸಮಾರೋಪ ಮತ್ತು ಶರಣ ಸಾಹಿತ್ಯ ಪರಿಷತ್‌ಯಿಂದ ಏರ್ಪಡಿಸಿದ್ದ ಶರಣ ಬೆಳೆದಿಂಗಳು 28ನೇ ಉಪನ್ಯಾಸ ಮಾಲಿಕೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಉತ್ತಮ ಆರೋಗ್ಯಕ್ಕೆ ಧ್ಯಾನ ಮತ್ತು ಯೋಗ ಅವಶ್ಯಕ. ಯೋಗದಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರುವುದಲ್ಲದೆ ರೋಗಗಳು ಮನುಷ್ಯನಿಂದ ದೂರವಾಗುತ್ತವೆ ಎಂದರು.
ತಾಲೂಕು ಕನ್ನಡ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಮಾತನಾಡಿ, ಯಶಸ್ವಿನಿ ಯೋಗ ಸಂಸ್ಥೆ ಯೋಗಪಟುಗಳಿಗೆ ತರಬೇತಿ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಣ್ಣೀಗೆರೆ ಗ್ರಾಮಕ್ಕೆ ಮಾನ್ಯತೆ ತಂದುಕೊಟ್ಟಿದೆ. ಶರಣರ ವಿಚಾರಧಾರೆಗಳನ್ನು ಶರಣ ಸಾಹಿತ್ಯ ಪರಿಷತ್ ಮೂಲಕ ಮನೆ ಮನಗಳಿಗೆ ಮುಟ್ಟಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ ಎಂದರು.
ಗ್ರಾಪಂ ಅಧ್ಯಕ್ಷ ಜಿ.ಡಿ.ಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಎ.ಎಂ.ಕುಮಾರಪ್ಪ, ಗ್ರಾಪಂ ಸದಸ್ಯರಾದ ಎ.ಎಂ.ತಮ್ಮಯ್ಯ, ಗೀತಾ ಗಜೇಂದ್ರ, ಭಾಗ್ಯಾ ಕಲ್ಲೇಶ್, ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್, ಕಲ್ಲೇಗೌಡ, ಕೆ.ವಿ.ಬಸವರಾಜಪ್ಪ, ಶಿವಕುಮಾರ್, ದಾದಾಪೀರ್ ಇತರರಿದ್ದರು