ಆರು ಅಪರಾಧಿಗಳಿ 7 ವರ್ಷ ಸಜೆ, 10 ಸಾವಿರ ರೂ. ದಂಡ

Crime_20250228235355095.jpg
Published on

ಮಹಿಳೆಯ ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ್ದ ಆರು ಅಪರಾಧಿಗಳಿಗೆ 7ವರ್ಷ ಕಠಿಣ ಸಜೆ ಮತ್ತು ತಲಾ 10 ಸಾವಿರ ರೂ. ದಂಡ ವಿಧಿಸಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಮೈಸೂರು ನಿವಾಸಿಗಳಾದ ಶಿವಕುಮಾರ್(30), ಹರೀಶ್ ಯಾದವ್(23), ಶರತ್(26), ಸುನಿಲ್ ಕುಮಾರ್(23), ಎಸ್.ಶಶಾಂಕ್(22), ಕಾರ್ತಿಕ್(22) ಜೈಲು ಶಿಕ್ಷೆಗೆ ಗುರಿಯಾದವರು.

ಏನಿದು ಪ್ರಕರಣ:

ಅಪರಾಧಿಗಳು 5 ವರ್ಷಗಳ ಹಿಂದೆ ದರೋಡೆ ಮಾಡುವ ಉದ್ದೇಶದಿಂದ ಮೈಸೂರಿನ ಮಹದೇವಪುರದ ನಾಗರತ್ನಮ್ಮ ಅವರ ಮನೆಗೆ ನುಗ್ಗಿ ಚಾಕು ತೋರಿಸಿ ಬೆದರಿಸಿ ಮನೆಯ ಬೀರುವಿನಲ್ಲಿದ್ದ ಚಿನ್ನಾಭರಣ, 17 ಸಾವಿರ ರೂ. ನಗದು, 2 ಮೊಬೈಲ್‌ಗಳನ್ನು ದೋಚಿದ್ದರು. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಆರಕ್ಷಕ ನಿರೀಕ್ಷಕ ಡಿ.ಮಂಜುನಾಥ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ರಮೇಶ ಅವರು ಪ್ರಕರಣದಲ್ಲಿ ಆರೋಪಿತರು ಕಲಂ 395, 397 ಐಪಿಸಿ ರೀತ್ಯಾ ಅಪರಾಧ ಎಸಗಿರುವುದು ರುಜುವಾತಾಗಿರುವುದಾಗಿ ತೀರ್ಮಾನಿಸಿ ಶುಕ್ರವಾರ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕ ಕೆ.ನಾಗರಾಜು ಅವರು ಸರ್ಕಾರದ ಪರ ವಾದ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net