ಆಯೋಗಕ್ಕೆ ನ್ಯಾಯಮೂರ್ತಿ ನೇಮಕ ಭರವಸೆ

CTD H.ANJANEAYA
Published on

ಚಿತ್ರದುರ್ಗ: ರಾಜಕಾರಣಕ್ಕಿಂತ ನನಗೆ ಸಾಮಾಜಿಕ ನ್ಯಾಯ ಮುಖ್ಯ. ಒಳಮೀಸಲಾತಿ ಜಾರಿಗೊಳಿಸುವುದು ಖಚಿತವೆಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿರುವುದಾಗಿ ಮಾಜಿ ಸಚಿವ ಎಚ್. ಆಂಜನೇಯ ಹೇಳಿದ್ದಾರೆ.

ಸಂಡೂರು ವಿಧಾನಸಭಾ ಕ್ಷೇತ್ರದ ಚೋರನೂರು ಗ್ರಾಮದಲ್ಲಿ ಬುಧವಾರ ಪ್ರಚಾರ ಸಭೆಯಲ್ಲಿ ಸಿಎಂ ವಿಷಯ ಪ್ರಸ್ತಾಪಿಸಿ, ಆದಿಜಾಂಬವ ಸಮುದಾಯಕ್ಕೆ ಆತಂಕ ಬೇಕಿಲ್ಲ. ಒಳಮೀಸಲಾತಿ ಜಾರಿ ನನ್ನ ಬದ್ಧತೆ. ಅನುಷ್ಠಾನ ಸಂದರ್ಭದಲ್ಲಿ ಕಾನೂನು ತೊಡಕಾಗದಂತೆ ಎಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದೇನೆ.

ದತ್ತಾಂಶ ಪಡೆಯಲು ಆಯೋಗ ರಚನೆಗೆ ಸಂಪುಟದ ಒಪ್ಪಿಗೆ ಪಡೆಯಲಾಗಿದೆ. ಶುಕ್ರವಾರವೇ ನ್ಯಾಯಮೂರ್ತಿ ಒಬ್ಬರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿರುವುದಾಗಿ ಆಂಜನೇಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿಗೆ ತಂದಿದ್ದು, ಕಾಮಗಾರಿ ಗುತ್ತಿಗೆಯಲ್ಲಿ ಎಸ್ಸಿ, ಎಸ್ಟಿಗೆ ಮೀಸಲಾತಿ ಜಾರಿಗೊಳಿಸಿದ್ದು ನಾನೇ. ಅದೇ ರೀತಿ ಒಳ ಮೀಸಲಾತಿಯನ್ನೂ ಜಾರಿಗೊಳಿಸುವೆ.

ಪ್ರಣಾಳಿಕೆ ಭರವಸೆಗಳನ್ನು ಈಡೇರಿಸುವುದು ನಮ್ಮ ಪ್ರಥಮ ಆದ್ಯತೆ, ಬದ್ಧತೆ. ಆದಿಜಾಂಬವ ಸಮುದಾಯಕ್ಕೆ ಯಾವುದೇ ಸಂಶಯ ಪಡುವುದು ಬೇಡ. ಪ್ರತಿಪಕ್ಷಗಳು ಸುಳ್ಳು ಆರೋಪಗಳನ್ನು ಮಾಡುತ್ತಿವೆ. ಕಾಂಗ್ರೆಸ್ ಆಡಳಿತದಲ್ಲಿ ಅಹಿಂದ ವರ್ಗಕ್ಕೆ ಸದಾ ಒಳಿತನ್ನೇ ಮಾಡಲಾಗಿದೆ. ಷಡ್ಯಂತ್ರ ನಡೆದರೂ ಕಾಂಗ್ರೆಸ್ ನೊಂದ ಜನರ ಪರ ಕಾನೂನು, ಯೋಜನೆ ರೂಪಿಸುವಲ್ಲಿ ಹೆಜ್ಜೆ ಹಿಂದಿಡುವುದಿಲ್ಲ. ಉದ್ಯೋಗ ನೇಮಕಾತಿಗೆ ತಡೆ ಹಾಕಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ಆಂಜನೇಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net