

ಆಯುರ್ವೇದ ಔಷಧ ಸ್ವಾಭಾವಿಕವಾಗಿ ದೇಹದ ಎಲ್ಲ ಅಂಗಗಳನ್ನು ಆರೈಕೆ ಮಾಡುವ ಕೆಲಸ ಮಾಡುತ್ತದೆ ಎಂದು ಕರ್ನಾಟಕ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮುಖ್ಯ ಆಡಳಿತಾಧಿಕಾರಿ ಕಮಲಾಬಾಯಿ ತಿಳಿಸಿದರು.
ನಗರದ ಜೆ.ಕೆ.ಮೈದಾನದ ಎಂಎಂಸಿ ಸಭಾಂಗಣದಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಕಾಯ ಚಿಕಿತ್ಸಾ ಸ್ನಾತಕೋತ್ತರ ವಿಭಾಗ 50ರ ಸಂಭ್ರಮ ಅಂಗವಾಗಿ ಹಳೆಯ ವಿದ್ಯಾರ್ಥಿ ಸಂಘ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ಸುವರ್ಣ ಕಾಯ’ ರಾಷ್ಟ್ರೀಯ ಮಟ್ಟದ ವೈಜ್ಞಾನಿಕ ವಿಚಾರ ಸಂಕಿರಣ ಮತ್ತು ಸ್ನೇಹ ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿಗೂ ಹಲವಾರು ಆರೋಗ್ಯ ತಜ್ಞರು, ವಿವಿಧ ಕಾಯಿಲೆಗಳಿಗೆ ಆಧುನಿಕ ಔಷಧ ಚಿಕಿತ್ಸೆಗಿಂತ, ಆಯುರ್ವೇದ ಚಿಕಿತ್ಸೆಗಾಗಿ ಸಲಹೆ ನೀಡುತ್ತಾರೆ. ಕಾರಣ ಆಯುರ್ವೇದ ಚಿಕಿತ್ಸೆಯಲ್ಲಿ ಯಾವುದೇ, ಅಡ್ಡಪರಿಣಾಮಗಳಾಗುವುದಿಲ್ಲ. ನಮ್ಮ ದೇಹದಲ್ಲಿ ಪ್ರತಿಯೊಂದು ಅಂಗಗಳು ತನ್ನದೇ ಆದ ಕಾರ್ಯ ಚಟುವಟಿಕೆ ಹೊಂದಿರುತ್ತವೆ. ಆಧುನಿಕ ಔಷಧದಿಂದಾಗಿ ಒಂದು ಖಾಯಿಲೆಗೆ ಚಿಕಿತ್ಸೆ ಪಡೆದುಕೊಂಡಲ್ಲಿ ಮತ್ತೊಂದು ಅಂಗಕ್ಕೆ ಅಡ್ಡ ಪರಿಣಾಮ ಉಂಟು ಮಾಡುತ್ತದೆ ಎಂದರು.
ನಾವೆಲ್ಲರೂ ಸಾರ್ವಜನಿಕರಿಗೆ ಆಯುರ್ವೇದ ಚಿಕಿತ್ಸೆಯ ಬಗ್ಗೆ ಅರಿವು ಮೂಡಿಸಿ, ಹೆಚ್ಚು ಪ್ರಸಿದ್ಧಿ ಮಾಡಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಈ ಸಂಸ್ಥೆಯಿಂದ ಪಡೆದುಕೊಂಡ ಜ್ಞಾನ, ವಿದ್ವತ್‌ಗಳನ್ನು ಸಮಾಜಕ್ಕೆ, ಸಂಸ್ಥೆಗಾಗಿ ಸೇವೆ ಮಾಡುವುದರ ಮೂಲಕ ಮುಡಿಪಾಗಿಸಬೇಕು ಎಂದು ಅಭಿಪ್ರಾಯಪಟ್ಟರು.
ಒಂದು ಶಿಕ್ಷಣ ಸಂಸ್ಥೆಯ 50ರ ಸಂಭ್ರಮ ಕೇವಲ ಆಚರಣೆಯಲ್ಲ, ಅದೊಂದು ಆ ಸಂಸ್ಥೆಯ ಅತ್ಯುತ್ತಮ ಸಾಧನೆ. ಸಂಸ್ಥೆ ನಡೆದು ಬಂದ ಹಾದಿ, ನೈತಿಕ ಮೌಲ್ಯಗಳು, ಅಧ್ಯಾತ್ಮಿಕ ಮೌಲ್ಯಗಳು ಸೇರಿದಂತೆ ಒಳ್ಳೆಯ ಸಂದರ್ಭಗಳನ್ನು ಹಾಗೂ ಒಳ್ಳೆಯ ವಿಷಯಗಳನ್ನು ನೆನಪು ಮಾಡಿಕೊಳ್ಳುವ ಸಂದರ್ಭವಾಗಿದೆ ಎಂದರು.
ಭಾರತ ಸ್ವತಂತ್ರವನ್ನೇ ಕಾಣದ ಸಮಯದಲ್ಲಿ ಬ್ರಿಟಿಷರ ಆಡಳಿತವಿದ್ದರೂ, ಜನರ ಒಳಿತಿಗಾಗಿ ಚಾಮರಾಜ ಒಡೆಯರ್ ಅವರು ಆಯುರ್ವೇದ ಕಾಲೇಜು ತೆರೆದು ಶ್ರೇಷ್ಠ ಕೆಲಸ ಮಾಡಿದರು ಎಂದರು.
ನಿವೃತ್ತ ಆಯುರ್ವೇದ ಉಪ ನಿರ್ದೇಶಕ ಡಾ.ಟಿ.ಎಲ್.ದೇವರಾಜ್, ಕಾಯ ಚಿಕಿತ್ಸಾ ಸ್ನಾತಕೋತ್ತರ ವಿಭಾಗ ಹಳೆಯ ವಿದ್ಯಾರ್ಥಿಗಳ ಸಂಘ ಅಧ್ಯಕ್ಷ ಡಾ.ವಿ.ರಾಜೇಂದ್ರ, ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಕೆ.ಎಸ್.ರಾಧಾಕೃಷ್ಣ ರಾಮರಾವ್, ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗ ಮುಖ್ಯಸ್ಥೆ ಡಾ.ಮೈತ್ರೇಯಿ ಇದ್ದರು.