ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಮುನ್ನ ಎಚ್ಚರ! ಬ್ಯಾಂಕ್ ಖಾತೆಗೆ ಬೀಳಲಿದೆ ಕನ್ನ

Published on

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುವ ಲಿಂಕ್‌ಗಳ ಮೂಲಕ ಆನ್‌ಲೈನ್ ಶಾಪಿಂಗ್ ಮಾಡುವ ಮುನ್ನ ಎಚ್ಚರ!

ಆನ್‌ಲೈನ್ ಮಾರ್ಕೆಟ್ ಹೆಸರಿನಲ್ಲಿ ಸೈಬರ್ ವಂಚಕರು ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ಜನರಿಗೆ ಯಾಮಾರಿತ್ತಿದ್ದಾರೆ. ೇಸ್‌ಬುಕ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ ಸೇರಿದಂತೆ ಇನ್ನಿತರ ಜಾಲತಾಣಗಳಲ್ಲಿ ಬ್ರ್ಯಾಂಡೆಡ್ ಕಂಪನಿಯ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವುದಾಗಿ ಆನ್‌ಲೈನ್ ಲಿಂಕ್‌ನಲ್ಲಿ ಜಾಹಿರಾತು ಪ್ರಕಟಿಸುತ್ತಿದ್ದಾರೆ. ಬ್ರ್ಯಾಂಡೆಡ್ ಕಂಪನಿಯ ವಸ್ತು ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಆಸೆಗೆ ಖರೀದಿಸಲು ಮುಂದಾದರೆ, ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಿ ಹಣ ದೋಚಲಿದ್ದಾರೆ.

ಹೀಗೆ ವಂಚಿಸುತ್ತಾರೆ?:
ಕೆ.ಆರ್.ಪುರದ ನಿವಾಸಿ ಕ್ಲೇವಿಡಿಯಾ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಲಿಂಕ್ ಮೂಲಕ ಆನ್‌ಲೈನ್ ಶಾಪಿಂಗ್ ಮಾಡಿದ್ದರು. ಇದಾದ ಕೆಲವೇ ನಿಮಿಷಗಳ ಬಳಿಕ ಕಂಪನಿಯ ಹೆಸರಿನಲ್ಲಿ ಕರೆ ಮಾಡಿದ್ದ ಅನಾಮಿಕ ವ್ಯಕ್ತಿ, ‘5 ರೂ. ಪಾವತಿಸಿದರೆ ಮಾತ್ರ ನಿಮ್ಮ ವಸ್ತುಗಳು ಡೆಲಿವರಿ ಆಗಲಿವೆ. ಹಣ ಪಾವತಿಸುವಂತೆ ಸೂಚಿಸಿ’ ಮತ್ತೊಂದು ಲಿಂಕ್ ಕಳುಹಿಸಿದ್ದ. ಕ್ಲೇವಿಡಿಯಾ ಅವರು ನೆಟ್ ಬ್ಯಾಂಕಿಂಗ್ ಬಳಸದ ಹಿನ್ನೆಲೆಯಲ್ಲಿ ತನಗೆ ಬಂದಿದ್ದ ಆನ್‌ಲೈನ್ ಲಿಂಕ್‌ನ್ನು ಸಂಬಂಧಿಕರಾದ ಆ್ಯಂಟೋನಿ ಎಂಬುವರಿಗೆ ರವಾನಿಸಿ, 5 ರೂ. ಪಾವತಿಸುವಂತೆ ತಿಳಿಸಿದ್ದರು.

ಆ್ಯಂಟೋನಿ ಅವರು ಹಣ ಪಾವತಿಸಲು, ಲಿಂಕ್ ತೆರೆದು ಬ್ಯಾಂಕ್ ವಿವರವನ್ನು ನಮೂದಿಸಿ ಅಪ್ಡೇಟ್ ಕೊಟ್ಟಿದ್ದರು. ಇದಾದ ಕೆಲವೇ ನಿಮಿಷಗಳ ಬಳಿಕ ಬ್ಯಾಂಕ್ ಖಾತೆಯಲ್ಲಿದ್ದ 25 ಸಾವಿರ ರೂ. ಕಡಿತವಾಗಿದೆ. ಈ ಕುರಿತು ಆ್ಯಂಟೋನಿ ಅವರು ಕೊಟ್ಟ ದೂರಿನ ಮೇರೆಗೆ ಅಪರಿಚಿತ ವಂಚಕರ ವಿರುದ್ಧ ಪ್ರಕರಣ ದಾಖಲಿಸಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ವೈಟ್‌ಫೀಲ್ಡ್ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net