

ರಾಮನಗರ : ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಸರಿಯಾದ ಸಮಯಕ್ಕೆ ಹಣ ಸಂದಾಯವಾಗುತ್ತಿಲ್ಲ ಎಂದು ಆರೋಪಿಸಿ ಮಾರುಕಟ್ಟೆ ಉಪನಿರ್ದೇಶಕರಿಗೆ ರೈತರು ಮಂಗಳವಾರ ೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಏಷ್ಯಾದ ಅತಿದೊಡ್ಡ ಮಾರುಕಟ್ಟೆಯಾಗಿರುವ ರಾಮನಗರದಲ್ಲಿ ಆನ್‌ಲೈನ್ ಹಣ ಸಂದಾಯ ವ್ಯವಸ್ಥೆ ಜಾರಿಯಾಗಿ ಬಹಳ ದಿನಗಳಾಗಿದ್ದರೂ ಅಧಿಕಾರಿಗಳ ವೈಫಲ್ಯದಿಂದ ರೈತರಿಗೆ ಸರಿಯಾಗಿ ಪಾವತಿ ಆಗುತ್ತಿಲ್ಲ. ಚೆಕ್‌ಗಳನ್ನು ನೀಡುತ್ತಾರೆ. ಇದನ್ನು ಖಾತೆಗೆ ಹಾಕಿಕೊಂಡರೆ ರೀಲರ್‌ಗಳ ಖಾತೆಯಲ್ಲಿ ಹಣವಿಲ್ಲದೆ ಚೆಕ್‌ಗಳು ಬೌನ್ಸ್ ಆಗುತ್ತವೆ. ಈ ಬಗ್ಗೆ ವಿಚಾರಿಸಿದರೆ ಕೆಲವರು ಧಮ್ಕಿ ಹಾಕುತ್ತಾರೆ. ಗೂಡು ತಂದ ರೈತರಿಗೆ ಸ್ಥಳದಲ್ಲಿಯೇ ಹಣ ಕೊಡದೇ ಹೋದರೆ ಅವರು ಊಟ ಮಾಡುವುದಾದರೂ ಹೇಗೆ ಎಂದು ಅಧಿಕಾರಿಯನ್ನು ರೈತರು ತರಾಟೆ ತೆಗೆದುಕೊಂಡರು.
ಅಧಿಕಾರಿಗಳು ರೀಲರ್‌ಗಳ ಜತೆ ಶಾಮೀಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ವ್ಯವಸ್ಥೆ ಜಾರಿ ಮಾಡುತ್ತಿಲ್ಲ. ಕೊಟ್ಟ ಚೆಕ್ ಬೌನ್ಸ್ ಆಗುತ್ತಿದ್ದರೂ, ರೈತರ ನೆರವಿಗೆ ಅಧಿಕಾರಿಗಳು ಆಗಮಿಸುತ್ತಿಲ್ಲ. ಇದರಿಂದಾಗಿ ರೈತರಿಗೆ ನಷ್ಟವಾಗುತ್ತಿದೆ. ಗೂಡು ಕೊಟ್ಟು ಹಣಕ್ಕಾಗಿ ತಿಂಗಳವರೆಗೂ ಕಾಯುವ ಅಗತ್ಯವೇನಿದೆ ಎಂದು ಮಾರುಕಟ್ಟೆ ಉಪನಿರ್ದೇಶಕ ಮುನ್ಷಿಬಸಯ್ಯ ಅವರನ್ನು ರೈತರು ಪ್ರಶ್ನಿಸಿದರು. ಕೂಡಲೇ ರೇಷ್ಮೆ ಇಲಾಖೆ ಆಯುಕ್ತರು, ಸಚಿವರು ರಾಮನಗರ ರೇಷ್ಮೆಗೂಡಿನ ಮಾರುಕಟ್ಟೆಯ ಅವ್ಯವಸ್ಥೆ ಬಗ್ಗೆ ಗಮನಹರಿಸಬೇಕು ಹಾಗೂ ತಕ್ಷಣವೇ ರೈತರಿಗೆ ಹಣ ಪಾವತಿಸುವ ವ್ಯವಸ್ಥೆ ಸರಿ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ರೈತರು ಅಧಿಕಾರಿಗೆ ಮುತ್ತಿಗೆ ಹಾಕುತ್ತಿರುವುದು ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.
ರೈತರನ್ನು ಸಮಾಧಾನಪಡಿಸಿದ ಮಾರುಕಟ್ಟೆ ಉಪನಿರ್ದೇಶಕ
ರೀಲರ್‌ಗಳ ಕಡೆಯಿಂದ ಸಕಾಲದಲ್ಲಿ ಸಹಕಾರ ದೊರೆಯುತ್ತಿಲ್ಲ. ಇದರಿಂದಾಗಿ ಸಮಸ್ಯೆ ಆಗಿದೆ. ಮಂಗಳವಾರದಿಂದ ಸ್ವಯಂ ಚಾಲ್ತಿ ಖಾತೆಯನ್ನು ಚಾಲೂ ಮಾಡಲಾಗಿದೆ. ಇದರಿಂದಾಗಿ ಕನಿಷ್ಠ 5 ಸಾವಿರ ರೂ. ಖಾತೆಯಲ್ಲಿ ಇರಬೇಕು. ಇಲ್ಲವಾದರೆ ಗೂಡು ಖರೀದಿ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಗೂಡು ತೂಕ ಹಾಕುವ ವೇಳೆಯಲ್ಲಿಯೇ ಖಾತೆಯಲ್ಲಿ ಹಣ ಇಲ್ಲದಿದ್ದರೆ ಗೂಡು ತೂಕ ಮಾಡದಂತೆ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತಿದೆ. ಈಗ ಉಂಟಾಗಿರುವ ಸಮಸ್ಯೆ ಪರಿಹರಿಸಿಕೊಡಲಾಗಿದೆ ಎಂದು ರೇಷ್ಮೆಗೂಡು ಮಾರುಕಟ್ಟೆ ಉಪನಿರ್ದೇಶಕ ಮುನ್ಷಿ ಬಸಯ್ಯ, ರೈತರನ್ನು ಸಮಾಧಾನಪಡಿಸಿದರು.