

ಸರಗೂರು: ಆನೆಕಾಲು ರೋಗ ಬಂದರೆ ಅದನ್ನು ಹೋಗಲಾಡಿಐಸಲು ಸಾಧ್ಯವಿಲ್ಲ. ಹಾಗಾಗಿ ರೋಗ ಬರುವ ಮುನ್ನ ಮುಂಜಾಗೃತಿ ಕ್ರಮ ವಹಿಸುವುದು ಅವಶ್ಯಕ ಎಂದು ಬಡಗಲಪುರ ಪ್ರಾಥಮಿಕ ಆರೋಗ್ಯಾಧಿಕಾರಿ ಡಾ ಅಲೀಮ್ ಪಾಷ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಗವಾಹಕ ಆಶ್ರಿತ ನಿಯಂತ್ರಣ ನಿರ್ಮೂಲನೆ ಇಲಾಖೆ ಸಹಹೋಗದಲ್ಲಿ ರಾಷ್ಟ್ರಿಯ ಆನೆಕಾಲು ರೋಗ ನಿರ್ಮೂಲನಾ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ತಾಲೂಕಿನ ಎಂಸಿ ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಸಿ ತಳಲುಹಾಡಿಯಲ್ಲಿ ಆಯೋಜಿಸಿದ್ದ ರಕ್ತ ಲೇಪನ ಸಂಗ್ರಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆನೆಕಾಲು ರೋಗ ಕ್ಯುಲೆಕ್ಸ್ ಎಂಬ ಸೊಳ್ಳೆಯ ಕಡಿತದಿಂದ ಬರುತ್ತದೆ. ಈ ಸೊಳ್ಳೆ ಕಡಿದ ನಂತರ ಸುಮಾರು ಎಂಟು ವರ್ಷದವರೆಗೆ ತನ್ನ ಪ್ರಭಾವವನ್ನು ತೋರದೆ ದೇಹದಲ್ಲಿ ಅಡಗಿಕೊಂಡಿರುತ್ತದೆ. ನಂತರ ದೇಹದಲ್ಲಿ ಚುಚ್ಚಿದ ಅನುಭವ, ಚಳಿ, ಜ್ವರ ಬರುವ ಮೂಲಕ ಅದು ತನ್ನ ಜೀವಂತಿಕೆಯನ್ನು ಸೂಚಿಸುತ್ತದೆ ಎಂದರು.
ರಾತ್ರಿ ವೇಳೆ ಮತ್ತು ವ್ಯಕ್ತಿ ನಿದ್ದೆಯಲ್ಲಿರುವಾಗ ಹುಳು ಜಾಗೃತವಾಗುತ್ತದೆ. ದೇಹದಲ್ಲಿ ಅದು ಸಾವಿರಾರು ಮೊಟ್ಟೆಗಳನ್ನು ಇಡುವುದರ ಮೂಲಕ ಅದು ಕಾಲು ಬಾವು ಕಾಣಲು ಕಾರಣವಾಗುತ್ತದೆ. ಹಾಗಾಗಿ ರೋಗ ಇರುವಿಕೆಯನ್ನು ರಕ್ತ ಪರೀಕ್ಷೆ ಮೂಲಕ ತಿಳಿಯುವುದು ಒಳಿತು. ಅಲ್ಲದೆ ರೋಗ ಇಲ್ಲದವರು ಕೂಡ ಸರ್ಕಾರ ನೀಡುವ ಉಚಿತ ಡಿಇಸಿ ಮಾತ್ರೆಗಳನ್ನು ಸೇವಿಸುವ ಮೂಲಕ ರೋಗ ನಿರ್ಮೂಲನೆಗೆ ಸಹಕರಿಸಬೇಕು ಎಂದರು.
ಗ್ರಾಪಂ ಸದಸ್ಯ ಪ್ರಕಾಶ್, ಡಾ.ರಾಘವೇಂದ್ರ, ಎಚ್.ಸಿ.ರಮೇಶ್, ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.