

ಬಾಳೆಹೊನ್ನೂರು: ಬನ್ನೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಅರಣ್ಯ ಇಲಾಖೆ ಮುಂಭಾಗದಲ್ಲಿ ಸಾರ್ವಜನಿಕರು ಹಾಗೂ ವಿವಿಧ ಪಕ್ಷಗಳ ಕಾರ್ಯಕರ್ತರು, ಮುಖಂಡರು ಗುರುವಾರ ದಿಢೀರ್ ಪ್ರತಿಭಟನೆ ನಡೆಸಿ ಮುಖ್ಯರಸ್ತೆ ತಡೆ ನಡೆಸುವ ಮೂಲಕ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬನ್ನೂರು ಗ್ರಾಮದಲ್ಲಿ ಕೆಲವು ತಿಂಗಳಿನಿಂದಲೂ ಎರಡು ಕಾಡಾನೆಗಳು ತೋಟಗಳಿಗೆ ಲಗ್ಗೆಯಿಡುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆಯ ಗಮನ ಸೆಳೆದರೂ ಸ್ಪಂದಿಸಿಲ್ಲ. ಇದರಿಂದ ಅಮಾಯಕ ಮಹಿಳೆಯ ಸಾವಾಗಿದೆ. ಸಾವಿಗೆ ಸೂಕ್ತ ನ್ಯಾಯ ದೊರೆಯಬೇಕು. ಸ್ಥಳಕ್ಕೆ ಅರಣ್ಯ ಸಚಿವರು ಬರಬೇಕು ಎಂದು ಪಟ್ಟುಹಿಡಿದು ರಸ್ತೆ ತಡೆ ನಡೆಸಿದರು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ ಸಾರ್ವಜನಿಕರು, ಮುಖಂಡರು ಪಕ್ಷ ಭೇದ ಮರೆತು ಅರಣ್ಯ ಇಲಾಖೆಯ ಕಾರ್ಯವೈಖರಿ ಖಂಡಿಸಿ, ಮುಖ್ಯರಸ್ತೆಯನ್ನು ಒಂದು ತಾಸಿಗೂ ಅಧಿಕ ಕಾಲ ತಡೆ ಮಾಡಿದರು. ಇದರಿಂದಾಗಿ ಮುಖ್ಯರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಪ್ರತಿಭಟನೆಯಲ್ಲಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ವೇದಿಕೆ ಸದಸ್ಯ ಅಭಿಷೇಕ್ ಹೊಸಳ್ಳಿ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೂಲಿ ಕಾರ್ಮಿಕ ಮಹಿಳೆಯ ಸಾವಾಗಿದೆ. ಬನ್ನೂರು ಗ್ರಾಮದಲ್ಲಿ ಆನೆ ಇರುವ ಕುರಿತು ಹತ್ತಾರು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೂ ಸ್ಪಂದಿಸಿಲ್ಲ. ಕೆಲ ಅಧಿಕಾರಿಗಳು ಕರೆಯನ್ನೇ ಸ್ವೀಕರಿಸಿಲ್ಲ. ಕಾಡಾನೆ ಎರಡು ತಿಂಗಳಿನಿಂದ ಆ ಭಾಗದಲ್ಲಿ ಓಡಾಟ ನಡೆಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ತಿಳಿದಿದೆ. ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಸರ್ಕಾರ ಹಾಗೂ ಇಲಾಖೆ ಮಾತನಾಡುತ್ತಿಲ್ಲ. ನಾವು ಯಾರನ್ನು ಪ್ರಶ್ನೆ ಮಾಡಬೇಕು ಎಂದರು.
ನೂರಾರು ವರ್ಷಗಳಿಂದ ಬದುಕು ಕಟ್ಟಿಕೊಂಡ ಮಲೆನಾಡಿಗರ ಪರಿಸ್ಥಿತಿ ಏನು ಎಂಬುದನ್ನು ತಿಳಿಯಬೇಕಿದೆ. ಈ ಬಗ್ಗೆ ದೊಡ್ಡ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದ್ದು ಸರ್ಕಾರ, ಸ್ಥಳೀಯ ಶಾಸಕರು, ಸಂಸದರಿಗೆ ನಮ್ಮ ಸಮಸ್ಯೆ ಕೇಳಲು ಸಮಯವಿಲ್ಲವಾಗಿದೆ ಎಂದು ಹೇಳಿದರು.
ಆನೆಗಳನ್ನು ಸ್ಥಳಾಂತರ ಮಾಡುವುದೊಂದೇ ಪರಿಹಾರ. ಆನೆ ಸ್ಥಳಾಂತರಕ್ಕೆ ಯಾವ ಯೋಜನೆ ಹಾಕಿಕೊಂಡಿದ್ದೀರಿ ಎಂಬುದನ್ನು ಸಾರ್ವಜನಿಕರಿಗೆ ಬಹಿರಂಗವಾಗಿ ಹೇಳಬೇಕು. ಆನೆ ಸ್ಥಳಾಂತರ ಕಾರ್ಯಾಚರಣೆ ಯಾವಾಗ ಆರಂಭ ಎಂದು ಕೂಡಲೇ ತಿಳಿಸಬೇಕು ಎಂದು ಆಗ್ರಹಿಸಿದರು. ಹುಲಿ ಸಾಯಿಸಿದರೆ ಕೇಸ್ ದಾಖಲು ಮಾಡುವ ಅಧಿಕಾರಿಗಳು, ಮನುಷ್ಯರನ್ನು ಆನೆ ಕೊಂದಾಗ ಯಾರ ಮೇಲೆ ಕೇಸ್ ಹಾಕುತ್ತೀರಿ ಎಂದು ಪ್ರಶ್ನಿಸಿದರು.