ಆನೆ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ನೆರವು

21 nrp 5 manavi
ಸೀತೂರು ಗ್ರಾಮದ ಕೆರೆಗದ್ದೆಯಲ್ಲಿ ಆನೆ ದಾಳಿಯಿಂದ ಮೃತಪಟ್ಟಿದ್ದ ಉಮೇಶ್ ಅವರ ಪತ್ನಿ ಪ್ರೇಮಾಗೆ ಗದ್ದೇಮನೆ ಚಾರಿಟಬಲ್ ಟ್ರಸ್ಟ್‌ನಿಂದ 1 ಲಕ್ಷ ರೂ. ಮೊತ್ತದ ಚೆಕ್ ಅನ್ನು ಗದ್ದೇಮನೆ ವಿಶ್ವನಾಥ್ ವಿತರಿಸಿದರು. ಉಪೇಂದ್ರ, ಎಚ್.ಇ.ದಿವಾಕರ, ಮೂಡ್ಲಿ ಶ್ರೀಧರ್, ಎನ್.ಪಿ.ರವಿ, ಚರಣ ಹೆಬ್ಬಾರ, ಕೆರೆಗದ್ದೆ ಚೇತನ್ ಇತರರಿದ್ದರು.
Published on

ಎನ್.ಆರ್.ಪುರ: ಕಾಡಾನೆಗಳು ನಾಡಿಗೆ ಬಾರದಂತೆ ಸರ್ಕಾರ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಗದ್ದೇಮನೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಗದ್ದೇಮನೆ ವಿಶ್ವನಾಥ ಒತ್ತಾಯಿಸಿದರು.

ಸೀತೂರು ಗ್ರಾಮದ ಕೆರೆಗದ್ದೆಯಲ್ಲಿ ಆನೆ ದಾಳಿಯಿಂದ ಮೃತಪಟ್ಟಿದ್ದ ಉಮೇಶ್ ಅವರ ಮನೆಗೆ ಮಂಗಳವಾರ ತೆರಳಿ ಅವರ ಪತ್ನಿ ಪ್ರೇಮಾ ಅವರಿಗೆ 1 ಲಕ್ಷ ರೂ. ಮೊತ್ತದ ಚೆಕ್ ವಿತರಿಸಿ ಮಾತನಾಡಿದರು. ಕಾಡಾನೆಗಳು ನಾಡಿಗೆ ಬಾರದಂತೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವುದು ಸೂಕ್ತ. ಈ ಬಗ್ಗೆ ಸರ್ಕಾರ ಹೆಚ್ಚು ಗಮನ ನೀಡಬೇಕು. ಕಾಡಿನಲ್ಲಿ ಆನೆಗಳಿಗೆ ನೀರು ಇಲ್ಲದಿರುವುದು, ಆಹಾರಕ್ಕಾಗಿ ಹಣ್ಣಿನ ಗಿಡ ಇಲ್ಲದೆ ಇರುವುದರಿಂದ ಆಹಾರ ಹುಡುಕಿ ನಾಡಿಗೆ ಬರುತ್ತಿವೆ. ತಾಲೂಕಿನಲ್ಲಿ ಕಾಡಾನೆಗಳ ದಾಳಿಯಿಂದ 4 ಜನ ಮೃತಪಟ್ಟಿದ್ದು ಮುಂದೆ ಈ ರೀತಿ ಆಗಬಾರದು. ಸರ್ಕಾರ ಆನೆ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮಲೆನಾಡು ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ದಾನಿ ವಿಶ್ವನಾಥ್ ಅವರು ಶೃಂಗೇರಿ ಕ್ಷೇತ್ರದಾದ್ಯಂತ ಶಾಲೆಗಳ ಮಕ್ಕಳಿಗೆ ಅಗತ್ಯ ಪರಿಕರಗಳನ್ನು ನೀಡುತ್ತಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟ ನಾಲ್ಕೂ ಕುಟುಂಬದವರ ಮನೆಗೆ ತೆರಳಿ ತಲಾ 1 ಲಕ್ಷ ರೂ. ನೀಡುತ್ತಿರುವುದಕ್ಕೆ ಮಲೆನಾಡು ರೈತ ಹಿತರಕ್ಷಣಾ ಸಮಿತಿಯಿಂದ ಅಭಿನಂದಿಸುತ್ತೇವೆ. ಕುಟುಂಬದಲ್ಲಿ ದುಡಿಯುವುವವರೇ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಮುಂದೆ ಹೀಗಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದರು.

ಎಕ್ಕಡಬೈಲು, ಬನ್ನೂರು ಗ್ರಾಮದ ಅಂಡುವಾನಿಗೆ ತೆರಳಿ ಕಾಡಾನೆ ದಾಳಿಯಿಂದ ಮತಪಟ್ಟ ಕುಟುಂಬದವರಿಗೆ 1 ಲಕ್ಷ ರೂ. ಮೊತ್ತದ ಚೆಕ್ ವಿತರಿಸಿದರು. ಖಾಂಡ್ಯ ಗ್ರಾಮದಲ್ಲಿ ಕಾಡುಕೋಣ ದಾಳಿಯಿಂದ ಮೃತಪಟ್ಟ ಕುಟುಂಬದವರಿಗೆ ತಲಾ 1 ಲಕ್ಷ ರೂ. ಚೆಕ್ ವಿತರಿಸಿದರು.

ಸೀತೂರು ಗ್ರಾಪಂ ಸದಸ್ಯರಾದ ಉಪೇಂದ್ರ, ಎಚ್.ಇ.ದಿವಾಕರ, ಮುಖಂಡರಾದ ಮೂಡ್ಲಿ ಶ್ರೀಧರ್, ಎನ್.ಪಿ.ರವಿ, ಚರಣ ಹೆಬ್ಬಾರ, ಕೆರೆಗದ್ದೆ ಚೇತನ್, ರೈತ ಹಿತರಕ್ಷಣಾ ಸಮಿತಿ ಮುಖಂಡರಾದ ಗದ್ದೇಮನೆ ಸತೀಶ್, ಹೊಸಹಳ್ಳಿ ಅಭಿಷೇಕ್, ಪುರುಷೋತ್ತಮ್, ಗದ್ದೇಮನೆ ಗಿರೀಶ್, ಹಂಚಿನಮನೆ ರಾಘವೇಂದ್ರ, ಸಚಿನ್ ಕುಡ್ನಳ್ಳಿ, ನಿಲುವಾನಿ ಪ್ರದೀಪ್, ಅಶೋಕ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net