

ಎಚ್.ಡಿ.ಕೋಟೆ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಆದಿವಾಸಿ ಜನರು ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ತಾಲೂಕು ಆಡಳಿತಸೌಧದ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು, ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ಸರಗೂರು, ಪಿರಿಯಾಪಟ್ಟಣ ತಾಲೂಕುಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಆದಿವಾಸಿ ಜನರು ವಾಸಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಅರಣ್ಯ ಉತ್ಪನ್ನಗಳ ಸಂಗ್ರಹಣೆಯ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಜೀವನಯೋಗ್ಯ ವಸತಿ, ಕುಡಿಯುವ ನೀರು, ರಸ್ತೆ, ಸಾರಿಗೆ ಸೌಲಭ್ಯ ಸೇರಿದಂತೆ ಮೂಲಸೌಕರ್ಯಗಳೂ ಇಲ್ಲದೆ ಕಾಡು ಪ್ರಾಣಿಗಳ ರೀತಿ ಬದುಕುತ್ತಿದ್ದೇವೆ. ನಮಗೆ ಸರ್ಕಾರ ನಮಗೆ ಮೂಲ ಸೌಕರ್ಯಗಳ ಜತೆ ನಮಗೆ ಆರ್ಥಿಕವಾಗಿ ಬದಕಲು ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಆದಿವಾಸಿ ಮಹಿಳೆ ಮಾದಮ್ಮ ಮಾತನಾಡಿ, ಅರಣ್ಯದಲ್ಲಿ ವಾಸಿಸುವ ನಮಗೆ ಕಾಡುಪ್ರಾಣಿಗಳಿಂದ ಒಂದು ಕಡೆ ತೊಂದರೆ ಆದರೆ, ಅರಣ್ಯ ಇಲಾಖೆಯಿಂದ ಇನ್ನೊಂದು ರೀತಿಯಲ್ಲಿ ತೊಂದರೆಗೊಳಗಾಗಿದ್ದೇವೆ. ಆದಿವಾಸಿ ಸಮುದಾಯ ಸಂಪೂರ್ಣವಾಗಿ ಹಿಂದುಳಿದಿರುವುದರಿಂದ ಆಧುನಿಕ ಜಗತ್ತಿನಲ್ಲಿ ಬದುಕಲು ದುಸ್ತರವಾಗಿದೆ. ಜೀವನೋಪಾಯಕ್ಕಾಗಿ ವಿವಿಧ ಕಡೆಗಳಲ್ಲಿ ಭೂಮಾಲೀಕರ ಹತ್ತಿರ ಕಾರ್ಮಿಕರಾಗಿ ದುಡಿದು ಜೀವನ ಸಾಗಿಸುವಂತಾಗಿದೆ. ಆದಿವಾಸಿ ಕುಟುಂಬಗಳಲ್ಲಿ ಅಪೌಷ್ಟಿಕತೆ ಸರ್ವೇ ಸಾಮಾನ್ಯವಾಗಿದೆ. ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆ (ಐಟಿಡಿಪಿ) ಇಲಾಖೆ ವತಿಯಿಂದ ಆದಿವಾಸಿ ಕುಟುಂಬಗಳಿಗೆ ವರ್ಷದಲ್ಲಿ ಆರು ಬಾರಿ ಮಾತ್ರ ಪೌಷ್ಟಿಕ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ. ಒಂದೆಡೆ ಕೂಲಿಯೂ ಲಭ್ಯವಿಲ್ಲದೆ, ಇನ್ನೊಂದೆಡೆ ಸರ್ಕಾರದ ಪಡಿತರ ಸಾಮಗ್ರಿಗಳು ಲಭ್ಯವಿಲ್ಲದೆ ಆದಿವಾಸಿ ಜನತೆ ಕಂಗಾಲಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾಡಿಗೂ ಸಲ್ಲದ, ನಾಡಿಗೂ ಸಲ್ಲದ ನಮ್ಮ ಬದುಕು ಅತಂತ್ರವಾಗಿದೆ. ಆದ್ದರಿಂದ ಆದಿವಾಸಿಗಳಿಗೆ ಸರ್ಕಾರ ಈ ವರ್ಷದಿಂದಲೇ ಪ್ರತಿ ತಿಂಗಳು ಸಹ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಂತರ ತಹಸೀಲ್ದಾರ್ ಪಿ.ಎಸ್.ಮಹೇಶ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸುನೀಲ್, ಪುಷ್ಪ ಜಿ, ಬೇಬಿ, ಬಸಮ್ಮ, ಮಾದಮ್ಮ, ಶಿವಮಾದಮ್ಮ, ರತ್ನಮ್ಮ, ನಂದಿನಿ, ನಂಜುಂಡ ಹಾಗೂ ಆದಿವಾಸಿ ಮುಖಂಡರು ಹಾಜರಿದ್ದರು.