

ಗೋಣಿಕೊಪ್ಪ: ನಿರ್ಣಾಯಕ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ವಾಸವಿರುವ ಆದಿವಾಸಿಗಳನ್ನು ಸ್ಥಳಾಂತರಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸೂಚಿಸಿರುವುದನ್ನು ವಿರೋಧಿಸಿ ಹಾಗೂ ಆದಿವಾಸಿಗಳಿಗೆ ತಿಳಿಸದೆ, ಗ್ರಾಮಸಭೆ ಒಪ್ಪಿಗೆ ಪಡೆಯದೆ ನಿಯಮ ಬಾಹಿರವಾಗಿ ನಾಗರಹೊಳೆ ಅರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ನಾಗರಹೊಳೆ ಅರಣ್ಯ ಇಲಾಖೆ ಕಚೇರಿ ಎದುರು ನಾಗರಹೊಳೆ ಆದಿವಾಸಿ ಜಮ್ಮ-ಪಾಳೆ ಹಕ್ಕು ಸ್ಥಾಪನಾ ಸಮಿತಿ ಮತ್ತು ಪೊನ್ನಂಪೇಟೆ ತಾಲೂಕು ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ಜಿ.ಎಸ್.ಭಾರದ್ವಾಜ್ ಅವರು 18 ರಾಜ್ಯದ ಅರಣ್ಯಾಧಿಕಾರಿಗಳಿಗೆ ಪತ್ರ ಬರೆದು, ನಿರ್ಣಾಯಕ ಹುಲಿ ಸಂರಕ್ಷಿತಾ ಪ್ರದೇಶಗಳಲ್ಲಿ 591 ಹಳ್ಳಿಗಳಲ್ಲಿ ವಾಸವಿರುವ 64,801 ಆದಿವಾಸಿ ಕುಟುಂಬಗಳನ್ನು ಸ್ಥಳಾಂತರಿಸುವ ಕಾರ್ಯ ನಿಧಾನವಾಗುತ್ತಿದೆ. ಚುರುಕುಗೊಳಿಸಲು ರಾಜ್ಯದಲ್ಲಿ ನಿರ್ಣಯ ಕೈಗೊಂಡು ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ ಸ್ವಯಂಪೇರಣೆಯಿಂದ ಸ್ಥಳಾಂತರವಾಗಲು ಇಚ್ಛಿಸುವವರನ್ನು ಸ್ಥಳಾಂತರಿಸಲು ಹೇಳಲಾಗಿದೆ.
ಆದರೆ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದ ಆದಿವಾಸಿ ಜನರನ್ನು ಅವರ ಸಂವಿಧಾನ ಬದ್ಧ ಹಕ್ಕಾದ ಅರಣ್ಯ ಹಕ್ಕು ಕಾಯ್ದೆ 2006ರ ಅಡಿಯ, ವೈಯಕ್ತಿಕ ಹಕ್ಕು, ಸಮುದಾಯದ ಅರಣ್ಯ ಹಕ್ಕು, ಸಮುದಾಯ ಅರಣ್ಯ ಸಂಪನ್ಮೂಲದ ಹಕ್ಕು ಹಾಗೂ ಆವಾಸ ಸ್ಥಾನದ ಹಕ್ಕುಗಳನ್ನು ಸಂಪೂರ್ಣ ಪರಿಗಣಿಸದೆ, ಗ್ರಾಮಸಭೆ ಒಪ್ಪಿಗೆ ಸಹ ಪಡೆಯದೆ ಬಲವಂತದಿಂದ ಸ್ಥಳಾಂತರಿಸುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಆದೇಶವನ್ನು ತರಾತುರಿಯಲ್ಲಿ ಹೊರಡಿಸಿರುವುದು ಕಾನೂನು ಬಾಹಿರ. ಅಲ್ಲದೆ 1996 ಬುಡಕಟ್ಟು ಪಂಚಾಯಿತಿ ಕಾಯ್ದೆ ಮತ್ತು 2006 ರ ಅರಣ್ಯ ಹಕ್ಕು ಕಾಯ್ದೆಗಳ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ನಾಗರಹೊಳೆ ಹುಲಿ ಸಂರಕ್ಷಿತಾ ಪ್ರದೇಶ ಎಂದು ಘೋಷಿಸಿರುವುದನ್ನು ಸಹ ಆದಿವಾಸಿಗಳು ಒಪ್ಪುವುದಿಲ್ಲ ಎಂದು ಹೇಳಿದರು.
ಈ ಸ್ಥಳಾಂತರ ಯೋಜನೆಯನ್ನು ನಾಗರಹೊಳೆ ಅರಣ್ಯ ಪ್ರದೇಶದಲ್ಲಿರುವ ಜನರು ವಿರೋಧಿಸುತ್ತಿದ್ದು, ಆದ್ದರಿಂದ ಸ್ಥಳಾಂತರ ಯೋಜನೆಯನ್ನು ಸಂಪೂರ್ಣ ರದ್ದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಾಗರಹೊಳೆ ಆದಿವಾಸಿ ಜಮ್ಮ-ಪಾಳೆ ಹಕ್ಕು ಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಕೆ.ತಿಮ್ಮ, ಕಾರ್ಯದರ್ಶಿ ಜೆ.ಎ.ಶಿವು, ಪೊನ್ನಂಪೇಟೆ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಸಿದ್ದಪ್ಪ, ಮಾಜಿ ಅಧ್ಯಕ್ಷ ಪಿ.ಸಿ.ರಾಮು, ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಮಣಿಕುಂಙ, ಮಲ್ಲಪ್ಪ, ಪಿ.ಟಿ.ರಾಜು, ಶಂಕರ, ಪುಷ್ಪ, ಪಿ.ಬಿ. ರವೀನಾ, ಶಾಂತಮ್ಮ, ಜೆ.ಎಂ. ಸೊಮಯ್ಯ, ಕಾಳ ಬಿ.ಸಿ, ಜೆ.ಎಸ್.ರಾಮಕೃಷ್ಣ, ಜೆ.ಜಿ. ಕುಮಾರ , ಜೆ.ಎ.ಅಯ್ಯಪ್ಪ, ಮುತ್ತಣ್ಣ, ಕಡ್ಡಿ, ಜೆ.ಕೆ.ಮಣಿ, ಚಂದ್ರ.ಜೆ, ಮಧು.ಪಿ, ಜೆ.ಕೆ.ಕಾಳ ಪೊನ್ನಂಪೇಟೆ, ವಿರಾಜಪೇಟೆ ತಾಲೂಕಿನ ಆದಿವಾಸಿ ಜನರು ಉಪಸ್ಥಿತರಿದ್ದರು. ಪ್ರತಿಭಟನಾಕಾರರು ಮನವಿ ಪತ್ರವನ್ನು ಎಸಿಎಫ್ ಅನನ್ಯ ಕುಮಾರ್ ಅವರಿಗೆ ನೀಡಿದರು.