

ಅಂತರಸಂತೆ: ಪೀಪಲ್ ಟ್ರೀ ಸಂಸ್ಥೆ ಕಳೆದ 15 ವರ್ಷಗಳಿಂದ ಆದಿವಾಸಿ ಸಮುದಾಯದ ಮಕ್ಕಳ ಶಿಕ್ಷಣ, ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ, ಸಿರಿಧಾನ್ಯ ಬೆಳೆಯಲು ಪ್ರೋತ್ಸಾಹ ಹಾಗೂ ತಾಂತ್ರಿಕ ತರಬೇತಿಗಳನ್ನು ನೀಡಿ ಶ್ರಮಿಸುತ್ತಿದೆ ಎಂದು ಸಂಸ್ಥೆಯ ಸಂಯೋಜಕ ಜವರೇಗೌಡ ತಿಳಿಸಿದರು.
ಹ್ಯಾಂಡ್ ಪೋಸ್ಟ್ ಮೈರಾಡ ತರಬೇತಿ ಕೇಂದ್ರದಲ್ಲಿ ಪೀಪಲ್ ಟ್ರೀ ಸಂಸ್ಥೆ ಇತ್ತೀಚೆಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನ 12 ಗ್ರಾಮ ಪಂಚಾಯಿತಿಗಳಲ್ಲಿ ಹವಾಮಾನ ಬದಲಾವಣೆ ಮತ್ತು ಜೀವ ವೈವಿಧ್ಯತೆ ಸಂರಕ್ಷಣೆ ಕುರಿತು ಸಮುದಾಯಗಳಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ರೈತರು, ಆದಿವಾಸಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪರಿಹಾರ ಕಂಡುಕೊಳ್ಳುವಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಪಾತ್ರ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಸಂವಾದ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಉಮೇಶ್ ಬಿ.ನೂರಲಕುಪ್ಪೆ ಮಾತನಾಡಿ, ಬುಡಕಟ್ಟು ಸಮುದಾಯದ ಇಂದಿನ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಅವರ ಶೈಕ್ಷಣಿಕ ಸ್ಥಾನಮಾನ ಕ್ಷೀಣಿಸುತ್ತದೆ, ಅರ್ಥಿಕ ಸ್ಥಿತಿಗತಿಯೂ ಕುಸಿಯುತ್ತಿದೆ, ಸ್ವಾವಲಂಬನೆ ಬದುಕು ಅತಂತ್ರವಾಗಿದೆ. ಹಾಡಿಗಳಲ್ಲಿ ಮೂಲ ಸಮಸ್ಯೆಗಳ ಹೇಳ ತೀರದಾಗಿದೆ. ಇದರಿಂದ ಆದಿವಾಸಿ ಸಮುದಾಯದಲ್ಲಿ ಶಿಕ್ಷಣ ಆಸಕ್ತಿ ಕಡಿಮೆಯಾಗಿ ಅವರಿಗೆ ಅವಕಾಶಗಳು ಇಲ್ಲದಂತಾಗಿದೆ. ಆದಿವಾಸಿ ಮುಖಂಡರು ಒಗ್ಗಟಿನಿಂದ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಇಲಾಖೆಗಳ ಜತೆ ಸಂಪರ್ಕ ಸಾಧಿಸಬೇಕು ಎಂದು ತಿಳಿಸಿದರು.
ಸಂವಾದದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯಿತಿಯ ಅಧ್ಯಕ್ಷ ನರಸಿಂಹೇಗೌಡ, ಮುಖಂಡರಾದ ಅಕ್ಬರ್‌ಪಾಷ, ಪುಟ್ಟರಾಜು, ಸಿ.ಜೆ.ಸಂತೋಷ್, ಯಶೋಧಮ್ಮ, ರತ್ನಮ್ಮ, ಚೆಲುವರಾಜು, ಮರಿಲಿಂಗಯ್ಯ, ಮಹೇಶ್. ದೊರೆಸ್ವಾಮಿ, ಶಿವಕುಮಾರ್, ಟಿ.ಮಂಜು, ಸುರೇಶ್, ಜಯ, ಶಶಿಕುಮಾರ್, ಬಾಲಕೃಷ್ಣ, ನಿಂಗರಾಜು ಮತ್ತಿತರರು ಭಾಗವಹಿಸಿದ್ದರು.