ಆದಿತ್ಯ ರಾವ್ ರೀತಿ ಪ್ರಸಿದ್ಧಿ ಪಡೆಯಬೇಕೆಂದು ಕರೆ ಮಾಡಿದ್ದೆ*ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬೆದರಿಕೆ ಕೆರೆ ಮಾಡಿದಾತ ವಿಚಾರಣೆ ವೇಳೆ ಹೇಳಿಕೆ

Published on

ಮಂಗಳೂರು: ‘ಆದಿತ್ಯ ರಾವ್’ ರೀತಿ ತಾನೂ ಪ್ರಚಾರ ಪಡೆಯಬೇಕು ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಬೆದರಿಕೆ ಕೆರೆ ಮಾಡಿರುವ ಕಾರ್ಕಳ ಮುದ್ರಾಡಿಯ ವಸಂತ ಕೃಷ್ಣ ಶೇರಿಗಾರ (33) ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.
ಎಂಟನೇ ತರಗತಿ ವರೆಗೆ ಕಲಿತಿರುವ ವಸಂತ್ ಮೊದಲು ಬೆಂಗಳೂರಿನಲ್ಲಿ ಹೋಟೆಲ್ ಕೆಲಸದಲ್ಲಿದ್ದ, ಬಳಿಕ ಊರಿನಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಊರಿನಲ್ಲಿ ಕೃಷಿ ಚಟುವಟಿಯಲ್ಲೂ ತನ್ನ ತೊಡಗಿಸಿಕೊಂಡಿದ್ದ. ಮೊಬೈಲ್ ಹೆಚ್ಚು ಬಳಸುತ್ತಿದ್ದ ಈತ ಗೂಗಲ್ ಸರ್ಚ್ ಮಾಡಿ ವಿಮಾನ ನಿಲ್ದಾಣದ ಹಿಂದಿನ ನಿರ್ದೇಶಕರ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಆಗಸ್ಟ್ 19ರಂದು ಮಧ್ಯಾಹ್ನ 1ಗಂಟೆ 5 ನಿಮಿಷಕ್ಕೆ ಅವರಿಗೆ ಕರೆ ಮಾಡಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದಾನೆ.
ಕಳೆದ ಜನವರಿಯಲ್ಲಿ ನಡೆದ ಆದಿತ್ಯ ರಾವ್  ಬಾಂಬ್  ಪ್ರಕರಣದ ಕುರಿತು ಹೆಚ್ಚು ಆಸಕ್ತನಾಗಿದ್ದ. ಅದೇ ಮಾದರಿಯಲ್ಲಿ ತಾನೂ ಪ್ರಸಿದ್ಧಿ ಪಡೆಯಬೇಕು ಎಂದು ಹುಸಿ ಕರೆ ಮಾಡಿದ್ದಾನೆ. ಪ್ರಸ್ತುತ ಈತನ ವಿರುದ್ಧ ವಿಮಾನ ನಿಲ್ದಾಣ ಭದ್ರತಾ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿ ಬೇಲ್ ರಹಿತ ಪ್ರಕರಣ ದಾಖಲಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net