ಆದಿಜಾಂಬವ ಜನಾಂಗದಿಂದ ರಸ್ತೆ ಸಂಚಾರ ತಡೆ

12tnp01
Published on

ತಿ.ನರಸೀಪುರ: ಆದಿಜಾಂಬವ ಸಮುದಾಯದ ರುದ್ರಭೂಮಿಗೆ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ತಾಲೂಕಿನ ಬನ್ನೂರು ಪಟ್ಟಣದ ಸುಭಾಷ್‌ನಗರ ಸೇರಿದಂತೆ 28 ಗ್ರಾಮಗಳ ಮಾದಿಗ ಜನಾಂಗದ ನೂರಾರು ಜನರು ಮಂಗಳವಾರ ಪಟ್ಟಣದ ಕಾವೇರಿ ಸೇತುವೆ ಬಳಿ ಮೈಸೂರು-ಮಳವಳ್ಳಿ ರಸ್ತೆ ಸಂಚಾರ ತಡೆದು ದಿಢೀರ್ ಪ್ರತಿಭಟನೆ ನಡೆಸಿದರು.

ಆದಿಜಾಂಬವ ಜನಾಂಗದ ರುದ್ರಭೂಮಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಪಟ್ಟಣದ ಕಾವೇರಿ ನದಿ ಪಕ್ಕದಲ್ಲಿರುವ ರುದ್ರಭೂಮಿ ಬಳಿ ಡಾ.ಬಾಬು ಜಗಜೀವನರಾಂ ಜನ ಕಲ್ಯಾಣ ಸಂಘ ಹಾಗೂ ಬನ್ನೂರು ಕಟ್ಟಡ ಕೂಲಿ ಕಾರ್ಮಿಕರ ಸಂಘದಿಂದ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲು ಮಂಗಳವಾರ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ತಾಲೂಕಿನ 28 ಗ್ರಾಮಗಳ ಮಾದಿಗ ಜನಾಂಗದ ನೂರಾರು ಮಂದಿ ಸೇರಿ ಜನಾಂಗದ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಸುತ್ತಿದ್ದ ವೇಳೆ ತಹಸೀಲ್ದಾರ್ ಸುರೇಶ್ ಆಚಾರ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮೇಗೌಡ ಸ್ಥಳಕ್ಕೆ ಆಗಮಿಸಿದರು.

ಈ ವೇಳೆ ಮುಖಂಡರು, ರುದ್ರಭೂಮಿಗೆ ತೆರಳಲು ರಸ್ತೆ ಸಂಪರ್ಕ ಇಲ್ಲದ ಬಗ್ಗೆ ಅಳಲು ತೋಡಿಕೊಂಡರು. ಈ ಸಂಬಂಧ ಮನವಿ ಪತ್ರವನ್ನು ಮಳವಳ್ಳಿ-ಮೈಸೂರು ಮುಖ್ಯ ರಸ್ಯೆಯಲ್ಲೇ ನೀಡುವುದಾಗಿ ಮುಖಂಡರು ಪಟ್ಟು ಹಿಡಿದರು. ಬಳಿಕ ಮುಖ್ಯ ರಸ್ತೆಗೆ ಆಗಮಿಸಿದ ಗ್ರಾಮಸ್ಥರು, ಕಾವೇರಿ ಸೇತುವೆ ಬಳಿ ರಸ್ತೆಗೆ ಅಡ್ಡಲಾಗಿ ಕುಳಿತು ದಿಢೀರ್ ರಸ್ತೆ ಸಂಚಾರ ತಡೆದು ಪ್ರತಿಭಟಿಸಿದರು. ಧಿಡೀರ್ ಪ್ರತಿಭಟನೆ ನಡೆಸಿದ್ದರಿಂದ ರಸ್ತೆ ಸಂಚಾರ ಅಸ್ತ ವ್ಯಸ್ತವಾಯಿತು. ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ ಕಿಮೀಗಟ್ಟಲೆ ವಾಹನಗಳು ಸಾಲು ಗಟ್ಟಿ ನಿಂತ ಪರಿಣಾಮ ಸಾರ್ವಜನಿಕರು ಪರದಾಡಿದರು.

ಡಾ.ಬಾಬು ಜಗಜೀವನರಾಂ ಜನ ಕಲ್ಯಾಣ ಸಂಘದ ಅಧ್ಯಕ್ಷ ಮಲಿಯೂರು ಡಿ.ಶಂಕರ್ ಮಾತನಾಡಿ, ತಾಲೂಕಿನ ಹಲವಾರು ಗ್ರಾಮಗಳಲ್ಲಿ ಆದಿ ಜಾಂಬವ ಜನಾಂಗದವರಿಗೆ ಶವ ಹೂಳಲು ಸ್ಮಶಾನಗಳಿಲ್ಲ. ಕೆಲವೆಡೆ ಸ್ಮಶಾನಗಳಿದ್ದರೂ ಶವ ಸಾಗಿಸಲು ರಸ್ತೆಗಳೇ ಇಲ್ಲ. ನರಿಪುರ ಗ್ರಾಮದಲ್ಲಿ ಸ್ಮಶಾನವೇ ಇಲ್ಲದ್ದರಿಂದ ನಾಲೆ ಏರಿಯಾದಲ್ಲೇ ಶವ ಸಂಸ್ಕಾರ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ನಾಲೆ ಪಕ್ಕದ ಜಮೀನು ಮಾಲೀಕರು ಜಾಗ ತನಗೆ ಸೇರಬೇಕೆಂದು ಒತ್ತುವರಿ ಮಾಡಿಕೊಂಡ ಕಾರಣ ತೀವ್ರ ಸಮಸ್ಯೆ ಎದುರಾಗಿದೆ. ಸ್ಮಶಾನಕ್ಕೆ ರಸ್ತೆ ಸಂಪರ್ಕ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಈ ಹಿಂದಿನ ಮೂವರು ತಹಸೀಲ್ದಾರ್‌ಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ಬನ್ನೂರಿನ ಸುಭಾಷ್ ನಗರದ ವಾಸಿಗಳ ರುದ್ರಭೂಮಿಗೆ ರಸ್ತೆ ಸಂಪರ್ಕ ಇಲ್ಲ. ಇರುವ ಜಮೀನಿನ ತೆವರಿನ ಮೇಲೆ ಹೆಣ ಹೊತ್ತು ಹೋಗುವ ಪರಿಸ್ಥಿತಿ ಇದೆ. ಈ ಸಂಬಂಧ ಕಳೆದ 70 ವರ್ಷಗಳಿಂದಲೂ ಪೂರ್ವಿಕರೂ ಪರಿಸ್ಥಿತಿ ಸರಿಪಡಿಸುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಿಸಿದ್ದರೂ ಅವರಿಂದಲೂ ನಮ್ಮ ಬೇಡಿಕೆಗೆ ಮನ್ನಣೆ ಸಿಗುವ ಮುನ್ಸೂಚನೆ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಸುರೇಶ್ ಆಚಾರ್, ಸಮಸ್ಯೆಯನ್ನು ಕಾನೂನು ಅಡಿಯಲ್ಲಿ ತ್ವರಿತವಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ. ಇಲಾಖಾ ವತಿಯಿಂದ ಸ್ಮಶಾನಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ತಡೆ ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಡಾ.ಬಾಬು ಜಗಜೀವನರಾಂ ಸಂಘದ ಉಪಾಧ್ಯಕ್ಷ ಸಿದ್ದನಹುಂಡಿ ಗೋವಿಂದರಾಜು, ಜನ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎನ್.ಪುಟ್ಟಸ್ವಾಮಿ, ಖಜಾಂಚಿ ಬನ್ನೂರು ಶಿವಣ್ಣ, ಮಂಗಿಪಚ್ಚನ ಹುಂಡಿ ಸಿ.ಲಿಂಗರಾಜು, ಮರಡೀಪುರ ಎಸ್.ಬಸವರಾಜು, ಕಳ್ಳೀಪುರ ನಾರಾಯಣ, ಗ್ರಾಪಂ ಸದಸ್ಯ ಶಿವಪ್ರಸಾದ್, ತಾಲೂಕು ಮಾದಿಗ ಮಹಾಸಂಘದ ತಾಲೂಕು ಅಧ್ಯಕ್ಷ ಭಾಸ್ಕರ್, ವಿಶ್ವ ಕರ್ಮ ಸಂಘದ ಅಧ್ಯಕ್ಷ ನಾಗರಾಜ ಚಾರ್ಯ, ಪ್ರಜ್ಞಾಮತ ಜಾಗೃತಿ ವೇದಿಕೆ ಅಧ್ಯಕ್ಷ ಬಿ.ಎಸ್.ಸುನೀಲ್ ಕುಮಾರ್, ದೊಡ್ಡ ಮುಲಗೂಡು ರಮೇಶ್, ಹೆಗ್ಗೂರು ಕೆಂಪಣ್ಣ, ಎಂ.ಸಿ.ಹುಂಡಿ ಜೈರಾಂ, ಸುರೇಶ್ , ರಾಚಪ್ಪ, ಸಿದ್ದಮಲ್ಲಯ್ಯ,ನಿಂಗಣ್ಣ, ಬಿ.ಆರ್.ಮಂಜುನಾಥ್, ರಾಜಣ್ಣ ಸೇರಿದಂತೆ ಗೋಪಾಲಪುರ ಹಾಗೂ ತಿ.ನರಸೀಪುರ ಗ್ರಾಮದ ಯಜಮಾನರು, ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net