ಆದಾಯದ ಸ್ವಲ್ಪ ಭಾಗ ಸಮಾಜಸೇವೆಗೆ ಮೀಸಲಿಡಿ

5kls1 horanadu
ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆದ ಜೀವ-ಭಾವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗಾಂಧಿ ವೃದ್ಧಾಶ್ರಮಕ್ಕೆ ಶ್ರೀ ಮಾತಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಲಕ್ಷ್ಮೀದೇವಿ, ಉಗ್ರಯ್ಯ, ಜಿ.ಭೀಮೇಶ್ವರ ಜೋಷಿ, ರಾಜಲಕ್ಷ್ಮೀ ಜೋಷಿ ಇತರರಿದ್ದರು.
Published on

ಕಳಸ: ಯಾವುದೇ ಒಂದು ಕ್ಷೇತ್ರ ಸಮಾಜದಿಂದ ಪಡೆದುಕೊಂಡು ಮತ್ತೆ ಅದನ್ನು ಸಮಾಜಕ್ಕೆ ನೀಡಿದಾಗ ಮಾತ್ರ ಅದು ಜೀವ ಮತ್ತು ಭಾವಕ್ಕೆ ವಿಶೇಷ ಒತ್ತು ನೀಡಿದಂತಾಗುತ್ತದೆ ಎಂದು ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನ ಧರ್ಮದರ್ಶಿ ಬಾಲಚಂದ್ರ ಭಟ್ ಹೇಳಿದರು.

ಹೊರನಾಡು ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಅವರ 34ನೇ ಪಟ್ಟಾಭಿಷೇಕ ಮಹೋತ್ಸವ ದಿನದ ಅಂಗವಾಗಿ ಭಾನುವಾರ ಜೀವ-ಭಾವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರಕ್ಕೆ ಬರುವ ಆದಾಯದ ಬಹುಪಾಲನ್ನು ವಿವಿಧ ಯೋಜನೆಗಳ ಮೂಲಕ ಈ ಸಮಾಜಕ್ಕಾಗಿ ವಿನಿಯೋಗಿಸುತ್ತಿರುವುದು ಜೀವಭಾವ ಕಾರ್ಯಕ್ರಮಕ್ಕೆ ನಿಜವಾದ ಅರ್ಥ ಕೊಡುತ್ತದೆ ಎಂದು ಹೇಳಿದರು.

ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಮಾತನಾಡಿ, ಜೀವದ ಜತೆಯಲ್ಲಿ ಭಾವನ್ನು ಈ ಪ್ರಪಂಚದಲ್ಲಿ ಪರಮಾತ್ಮ ಕೊಟ್ಟಿರುವುದು ಮನುಷ್ಯನಿಗೆ ಮಾತ್ರ. ಮನುಷ್ಯ ಸ್ವಾರ್ಥದಿಂದ ನಿಸ್ವಾರ್ಥಕ್ಕೆ ಬದಲಾವಣೆ ಆಗಬೇಕು. ಈ ಜೀವನ ನಮಗೆ ಸೀಮಿತವಾಗದೆ ಇತರರಿಗೂ ಪೂರಕವಾಗಿರಬೇಕು. ಮನುಷ್ಯನ ಜೀವನ ಎಲ್ಲ ಋಣಗಳಿಂದ ಮುಕ್ತವಾದಾಗ ಮಾತ್ರ ಆತನ ಜೀವನ ಶ್ರೇಷ್ಠತೆ ಕಾಣುತ್ತದೆ ಎಂದು ಹೇಳಿದರು.

ಒಂದು ಲಕ್ಷ ರೂ. ನಗದು ಜತೆಗೆ ಶ್ರೀ ಮಾತಾ ಪ್ರಶಸ್ತಿಯನ್ನು ಬೆಂಗಳೂರಿನ ಗಾಂಧಿ ವೃದ್ಧಾಶ್ರಮಕ್ಕೆ ಪ್ರದಾನ ಮಾಡಲಾಯಿತು. ಧರ್ಮಕರ್ತರ ಪಟ್ಟಾಭಿಷೇಕ ಮಹೋತ್ಸವ ದಿನದ ಅಂಗವಾಗಿ ಧರ್ಮಕರ್ತರ ಹಸ್ತದಿಂದ ಶ್ರೀಮಾತೆಗೆ ಅಭಿಷೇಕ, ವಿಶೇಷ ಪೂಜೆ, ನವಗ್ರಹ ಹೋಮ ಹಾಗೂ ಉಚಿತ ಆರೋಗ್ಯ ತಪಾಸಣೆ ನಡೆಯಿತು.

ಗಾಂಧಿ ವೃದ್ಧಾಶ್ರಮದ ಅಧ್ಯಕ್ಷೆ ಲಕ್ಷ್ಮೀದೇವಿ, ಶ್ರೀಕ್ಷೇತ್ರ ಶಕಟಪುರ ಮಠದ ರಾಘವ, ಹೊರನಾಡು ದೇವಸ್ಥಾನದ ಟ್ರಸ್ಟಿ ರಾಜಲಕ್ಷ್ಮೀ ಜೋಷಿ, ಆಡಳಿತ ಮಂಡಳಿ ಕಾರ್ಯದರ್ಶಿ ರಾಜಗೋಪಾಲ ಜೋಷಿ, ಗಿರಿಜಾ ಶಂಕರ ಜೋಷಿ, ಸಾವಿತ್ರಿ ಜೋಷಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net