ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳು ಕ್ರಮ

Published on

ಕಡೂರು: ಪಟ್ಟಣದ ಅಭಿವೃದ್ದಿಯ ದೃಷ್ಟಿಕೋನ ಹಾಗೂ ಪುರಸಭೆಗೆ ಬರಬೇಕಾದ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಈ ಬಾರಿ ಕಂದಾಯ ವಸೂಲಾತಿ ಅಂದೋಲನ ಮತ್ತು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀ ನಿವಾಸ್ ಹೇಳಿದರು.

ಪಟ್ಟಣದ ಪುರಸಭೆಯ ಕನಕ ಸಭಾಂಗಣದಲ್ಲಿ ಸೋಮವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆ ಸದಸ್ಯರು ಹಾಗೂ ನಾಗರಿಕರ ಸಲಹೆಗಳನ್ನು ಬಳಸಿಕೊಂಡು ತೆರಿಗೆ ಹಣದಲ್ಲಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಪುರಸಭೆ ಸಮಗ್ರ ಅಭಿವೃದ್ಧಿಗೆ ಆದಾಯ ಹೆಚ್ಚಿಸಿಕೊಳ್ಳಲು ಬೃಹತ್ ಕಂದಾಯದ ಆಂದೋಲನ ಮೂಲಕ ನಡೆಸಲು ನಿಶ್ಚಿಯಿಸಲಾಗಿದೆ ಎಂದರು.

2025-26ನೇ ಸಾಲಿನಲ್ಲಿ ಪಟ್ಟಣದಲ್ಲಿರುವ ಸ್ವಯಂ ಆಸ್ತಿ ನೋಂದಣಿ ಘೋಷಿಸಿರುವ ಪ್ರತಿಯೊಬ್ಬ ನಿವೇಶನದಾರರಿಗೆ ಮಾರ್ಚ್ ತಿಂಗಳೊಳಗಾಗಿ ಅಂಚೆ ಮೂಲಕ ನಿಗದಿತ ತಿಂಗಳೊಳಗೆ ತೆರಿಗೆ ಪಾವತಿಸಿಕೊಳ್ಳುವಂತೆ ಮಾಹಿತಿ ನೀಡಲಾಗುತ್ತದೆ. ಇದರಿಂದ ನಿವೇಶನದಾರರಿಗೆ ಪೂರಕ ಮಾಹಿತಿ ನೀಡುವ ಜತೆಗೆ ಆದಾಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಕಂದಾಯ ಪಾವತಿದಾರರಿಗೆ ವಿನಾಯಿತಿಯೂ ದೊರೆಯಲಿದೆ ಎಂದರು.

ಪಟ್ಟಣದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಸ್ವಚ್ಛತೆಗೆ ಒತ್ತು ಕೊಡಬೇಕಿದೆ. ಸರಿಯಾದ ಲೈಟಿಂಗ್ ವ್ಯವಸ್ಥೆಯಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕು ಎಂದು ಪುರಸಭೆ ಸದಸ್ಯ ಮರುಗುದ್ದಿ ಮನು ಒತ್ತಾಯಿಸಿದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ರೋಟರಿ ಮಾಜಿ ಅಧ್ಯಕ್ಷ ಕೆ.ಪಿ. ರಾಘವೇಂದ್ರ, ಶ್ರೀಕಾಂತ್ ಹಾಗೂ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net