ಆದಾಯಕ್ಕಿಂತ ಹೆಚ್ಚು ಸಂಪಾದನೆ ಮಾಡಿಲ್ಲ

5 nrp 3 rajegowda
ಟಿ.ಡಿ.ರಾಜೇಗೌಡ
Published on

ಎನ್.ಆರ್.ಪುರ: ನಾನು ಎಂದಿಗೂ ಕ್ಷೇತ್ರದ ಜನರಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ. ನಾನು ಯಾವುದೇ ರೀತಿಯಲ್ಲೂ ಆದಾಯಕ್ಕಿಂತ ಹೆಚ್ಚು ಸಂಪಾದನೆ ಮಾಡಿಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮನೆ ಮೇಲೆ ಲೋಕಾಯುಕ್ತ ದಾಳಿ ವೇಳೆ ಮನೆಯಿಂದ ಹೊರಬಂದು ಕುಳಿತು ಎಲ್ಲ ರೀತಿಯಲ್ಲೂ ತನಿಖೆಗೆ ಸಹಕರಿಸಿದ್ದೇನೆ. ಆದಾಯಕ್ಕಿಂತ ಸಂಪತ್ತು ಕಡಿಮೆ ಇದೆಯೇ ಹೊರತು ಜಾಸ್ತಿ ಇಲ್ಲ. ಎಲ್ಲದಕ್ಕೂ ದಾಖಲೆ ನೀಡುತ್ತೇನೆ ಎಂದು ತಿಳಿಸಿದರು.

ಅಧಿಕ ಮಳೆಯಿಂದಾಗಿ ರಸ್ತೆಗಳು ಅಧಿಕ ಗುಂಡಿಗಳು ಬಿದ್ದಿವೆ. ಮಳೆ ಕಡಿಮೆಯಾಗಬೇಕು, ಭೂಮಿ ಸಂಪೂರ್ಣ ತೇವಾಂಶ ಕಡಿಮೆ ಆಗಬೇಕು. ಆಗ ಪ್ಯಾಚ್‌ವರ್ಕ್ ಮಾಡಿದರೆ ಮಾತ್ರ ಸಾರ್ಥಕವಾಗುತ್ತದೆ. ಇಲ್ಲವಾದಲ್ಲಿ ಮತ್ತೆರಡು ದಿನಗಳಲ್ಲೇ ಕಿತ್ತುಹೋಗುತ್ತದೆ. ನನಗೂ ರಾಜಕೀಯದ ಅನುಭವವಿದೆ. ಬೇರೆಯವರಿಂದ ಕಲಿಯುವುದೇನಿಲ್ಲ. ಜಿಲ್ಲೆಯ ಎಲ್ಲ ಶಾಸಕರು ನಿಯೋಗ ಹೋಗಿ ಮುಖ್ಯಮಂತ್ರಿಗೆ ರಸ್ತೆ ಗುಂಡಿ ಮುಚ್ಚಿಸಲು, ಬ್ರಿಡ್ಜ್, ಕಾಲುಸಂಕಗಳಿಗಾಗಿ ಅನುದಾನದ ಬೇಡಿಕೆ ಇಟ್ಟಿದ್ದೇವೆ ಎಂದರು.

ಕೊಪ್ಪದಿಂದ ಕೊರಲಕೊಪ್ಪದವರೆಗಿನ ರಸ್ತೆ ಕಾಮಗಾರಿಗೆ 19 ಕೋಟಿ, ವಸ್ತಾರೆಯಿಂದ ಶೃಂಗೇರಿಗೆ 95 ಕೋಟಿ, ಕೊಪ್ಪದಿಂದ ಜಯಪುರ ರಸ್ತೆಗೆ 11 ಕೋಟಿ, ಎನ್.ಆರ್.ಪುರದ ಅಗ್ರಹಾರದಿಂದ ಪ್ರವಾಸಿ ಮಂದಿರ ಸರ್ಕಲ್‌ವರೆಗೆ ರಸ್ತೆ ಅಗಲೀಕರಣಕ್ಕಾಗಿ 60 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೂಡಲೇ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದೇವೆ. ಅತಿವೃಷ್ಟಿಯಡಿ 16 ಕೋಟಿ ರೂ. ಪ್ರಸ್ತಾವನೆಗೆ ಮಂಜೂರಾತಿ ಆಗಲಿದೆ. ಕಾಲುಸಂಕ, ಸೇತುವೆಗಳಿಗೂ ಹಂತ ಹಂತವಾಗಿ ಅನುದಾನ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ವಿರೋಧ ಪಕ್ಷದವರ ಟೀಕೆಯನ್ನು ನಾನು ಸಲಹೆ ಎಂತಲೇ ಸ್ವೀಕರಿಸುತ್ತೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net