ಆರ್‌ಜೆ ಕಾಲೇಜಿನ ಪರಿಚಯ ಕಾರ್ಯಕ್ರಮ | ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಉಪದೇಶಗಳನ್ನು ಎಲ್ಲರೂ ಹೇಳುತ್ತಾರೆ. ಆದರೆ, ಆಚರಣೆ ಮಾಡುವುದಿಲ್ಲ. ಹೀಗಾಗಿ ಜೀವನದಲ್ಲಿ ಆದರ್ಶಗಳ ಆಚರಣೆ ಮತ್ತು ಅನುಷ್ಠಾನಗೊಳಿಸುವುದಕ್ಕಿಂತಲೂ ದೊಡ್ಡ ಉಪದೇಶ ಮತ್ತೊಂದಿಲ್ಲ ಎಂದು ಬ್ರಹ್ಮಚಾರಿ ಮಹೇಶ್ವರ ಗುರೂಜಿ ಹೇಳಿದರು.
ನಗರದ ಎಸ್.ಎಂ. ಪಂಡಿತ ರಂಗಮAದಿರದಲ್ಲಿ ರಮಾಬಾಯಿ ಜಾಹಗೀರದಾರ್ ಪದವಿಪೂರ್ವ (ಆರ್‌ಜೆ) ಕಾಲೇಜು ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ಲೌಖಿಕ ವಿದ್ಯ ಕಲಿಸುವವರಿಗೆ ಉಪಾಧ್ಯಾಯ ಎನ್ನುತ್ತಾರೆ. ಹತ್ತು ಉಪಾಧ್ಯಾಯರಿಗೆ ಒಬ್ಬ ಆಚಾರ್ಯ ಸಮನಾಗುತ್ತಾನೆ, ನೂರು ಜನ ಆಚಾರ್ಯರು ಒಬ್ಬ ತಂದೆಗೆ ಸಮ, ಸಾವಿರ ತಂದೆಗೆ ಒಬ್ಬ ತಾಯಿ ಸಮವಾಗುತ್ತಾಳೆ ಇದರಿಂದಾಗಿಯೇ ಪವಿತ್ರ ಸ್ಥಾನ ತಾಯಿಗಿದೆ ಎಂದರು.
ವಿದ್ಯಾರ್ಥಿ ಗಳು ತಂದೆ, ತಾಯಿ, ವೈದ್ಯರು ಹಾಗೂ ಗುರು (ಶಿಕ್ಷರ) ಬಳಿ ಸುಳ್ಳು ಹೇಳಬಾರದು. ವೈದ್ಯರ ಬಳಿ ಸುಳ್ಳು ಹೇಳಿದರೆ ರೋಗ ವಾಸಿಯಾಗುವುದಿಲ್ಲ. ತಂದೆ, ತಾಯಿ. ಶಿಕ್ಷರ ಬಳಿ ಸುಳ್ಳು ಹೇಳಿದರೆ ಜೀವನ ಹಾಳಾಗುತ್ತದೆ ಎಂದು ಎಚ್ಚರಿಸಿದರು ಎಂದು ತಿಳಿಸಿದರು.
ಬದುಕನ್ನು ಗೆಲ್ಲಬೇಕಾದರೆ ಆಧ್ಯಾತ್ಮಿಕ ಶಿಕ್ಷಣ ಅಗತ್ಯ. ಶಿಕ್ಷಣದ ಜತೆ ಸಂಸ್ಕಾರವೂ ಬೇಕಾಗಿದೆ.ಸಂಸ್ಕಾರದ ಕೊರತೆಯಿಂದಾಗಿ ಇಂದು ಜಗತ್ತಿನಲ್ಲಿ ಅಶಾಂತಿ ತಾಂಡವವಾಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಹೆಚ್ಚು ಮೌಲ್ಯಗಳನ್ನು ಕಲಿಸಬೇಕು. ಶಿಕ್ಷಕರ ಮನಸ್ಸು ಗೆಲ್ಲುವವರೆ ನಿಜವಾದ ಆದರ್ಶ ವಿದ್ಯಾರ್ಥಿಗಳು. ಮಕ್ಕಳಲ್ಲಿ ಕಲಿಯುವ ಇಚ್ಛೆ ಹುಟ್ಟಿಸುವವನೇ ಆದರ್ಶ ಶಿಕ್ಷಕನಾಗುತ್ತಾನೆ ಎಂದು ಗುರೂಜಿ ಹೇಳಿದರು.
ಆರ್.ಜೆ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರು ಆಗಿರುವ ಪ್ರಾಚಾರ್ಯ ಡಾ.ಪ್ರಹ್ಲಾದ ಬುರ್ಲಿ, ಆಡಳಿತಾಧಿಕಾರಿ ಜ್ಯೋತಿ ಪ್ರಹ್ಲಾದ ಭ್ಹುರ್ಲಿ ಮೊದಲಾದವರಿದ್ದರು. ಸಮಾರಂಭದಲ್ಲಿ ನೀಟ್, ಜೆಇಇ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಉತ್ತೀರ್ಣರಾದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
=========