

ಚಿಕ್ಕಬಳ್ಳಾಪುರ: ನಾಡಧ್ವಜ ದಹನ ಮತ್ತು ಮಹನೀಯರ ಪ್ರತಿಮೆ ಭಗ್ನ ವಿರೋಧಿಸಿ ಜಿಲ್ಲೆಯ ವಿವಿಧೆಡೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದವು. ಜಿಲ್ಲಾ ಕೇಂದ್ರದ ಅಂಬೇಡ್ಕರ್ ವೃತ್ತ, ಬಲಮುರಿ ವೃತ್ತದಲ್ಲಿ ರಸ್ತೆ ಸಂಚಾರ ತಡೆ ನಡೆಸಿದ ಕರವೇ, ಅಬ್ದುಲ್ ಕಲಾಂ ಫೌಂಡೇಷನ್, ಕುರುಬರ ಸಂಘದ ಕಾರ್ಯಕರ್ತರು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಆರ್.ಲತಾ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ದೇಶ ಮತ್ತು ನಾಡಿಗಾಗಿ ಜೀವನ ತ್ಯಾಗ ಮಾಡಿದ ಮಹನೀಯರನ್ನು ಅವಮಾನಿಸಬಾರದು. ಯಾವುದೇ ಭೇದವಿಲ್ಲದೇ ಗೌರವಿಸುವುದರ ಜತೆಗೆ ಯುವ ಜನತೆಯಲ್ಲಿ ಆದರ್ಶಗಳನ್ನು ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕು. ಆದರೆ, ವಿವಾದಾತ್ಮಕ ವಿಚಾರಗಳ ಹಿನ್ನೆಲೆಯಲ್ಲಿ ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಪ್ರತಿಮೆಯನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವುದು ಖಂಡನೀಯ ಎಂದು ಕರವೇ (ಕನ್ನಡಪರ ಸಂಘಟನೆಗಳ ಒಕ್ಕೂಟ) ಅಧ್ಯಕ್ಷ ಅಗಲಗುರ್ಕಿ ಚಲಪತಿ ಆಕ್ರೋಶ ವ್ಯಕ್ತಪಡಿಸಿದರು.
ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯು ದಬ್ಬಾಳಿಕೆ, ಹಲ್ಲೆ, ನಾಡದ್ರೋಹಿ ಕೆಲಸಗಳ ಮೂಲಕ ಕನ್ನಡಿಗರ ತಾಳ್ಮೆ ಪರೀಕ್ಷಿಸುತ್ತಿದೆ. ಕೋಟ್ಯಂತರ ಕನ್ನಡಿಗರ ಭಾವನಾತ್ಮಕತೆ ಪ್ರತೀಕವಾಗಿರುವ ಕನ್ನಡ ಬಾವುಟವನ್ನು ಸುಟ್ಟಿರುವುದು ಸಹಿಸುವುದು ಅಸಾಧ್ಯ ಎಂದು ಎಚ್ಚರಿಸಿದ ಚಲಪತಿ, ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿರುವುದನ್ನು ಮರೆತು ಏಕತೆಗೆ ನಿರಂತರವಾಗಿ ಭಂಗ ತರುವ ಚಟುವಟಿಕೆಯು ಅಕ್ಷಮ್ಯ ಅಪರಾಧ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೇಶಭಕ್ತರ ಪ್ರತಿಮೆಯನ್ನು ಭಗ್ನಗೊಳಿಸಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯ ನಷ್ಟವನ್ನು ನಿರ್ದಾಕ್ಷಿಣ್ಯವಾಗಿ ವಸೂಲು ಮಾಡುವುದು ಸೇರಿದಂತೆ ಎರಡು ರಾಜ್ಯಗಳ ನಡುವಿನ ಸೌಹಾರ್ದತೆಯ ವಾತಾವರಣವನ್ನು ಕೆಡಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂಬರುವ ದಿನಗಳಲ್ಲಿ ಕುಕೃತ್ಯಗಳು ಸಂಭವಿಸದಂತೆ ಜಾಗ್ರತಿ ವಹಿಸುವಂತೆ ಅಬ್ದುಲ್ ಕಲಾಂ ಫೌಂಡೇಷನ್ ಅಧ್ಯಕ್ಷ ನಂದಿ ಎಂ.ಎಂ.ಭಾಷಾ ಮನವಿ ಮಾಡಿದರು.