ಆಡಳಿತ ನಡೆಸುವವರ ನೀಚತನದಿಂದ ನಮ್ಮ ಜನ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ

8
Published on

ಆಡಳಿತ ನಡೆಸುವವರ ನೀಚತನದಿಂದ ನಮ್ಮ ಜನ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಹಿರಿಯ ಚಿಂತಕ ಪ್ರೊ.ಕಾಳೇಗೌಡ ನಾಗವಾರ ವಿಷಾದ ವ್ಯಕ್ತಪಡಿಸಿದರು.

ನಗರದ ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮದ್ದೂರು ದೊರೆಸ್ವಾಮಿ ರಚಿಸಿರುವ ‘ಹಂಬಲದ ಹಣತೆ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಆಳುವವರಿಂದ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯನ್ನು ಎತ್ತಬೇಕಾದ ಜನರು ಅಯ್ಯೋ ನಮ್ಮ ಹಣೆ ಬರಹವೇ ಸರಿಯಿಲ್ಲ ಎಂದು ಗೋಳಾಡುತ್ತಾರೆ. ಓದು-ಬರಹ ಗೊತ್ತಿಲ್ಲದ ಅನಕ್ಷರಸ್ಥರಿರಲಿ, ಹೆಚ್ಚಿನ ವಿದ್ಯಾಭ್ಯಾಸ ಮಾಡಿರುವ, ಕಲಿತಿರುವವರೇ ಮೌಢ್ಯವನ್ನು ಬಲವಾಗಿ ನಂಬುತ್ತಿದ್ದಾರೆ ಎಂದರು.

ದೇಶದ ಬಹುತೇಕ ರಾಜಕಾರಣಿಗಳು ಮಾಡಿರುವ ಅನಾಚಾರ-ಅಪರಾಧಗಳಿಂದ ಅವರನ್ನು ರಕ್ಷಣೆ ಮಾಡಲು ಆಯಾ ಜಾತಿಗಳ ಮಠಾಧೀಶರು ಮುಂದೆ ಬರುತ್ತಾರೆ. ಇದು ಅತ್ಯಂತ ನೋವಿನ ಸಂಗತಿ. ಮಂಟೇಸ್ವಾಮಿ ಮತ್ತು ಮಾದಪ್ಪ ಕಾವೇರಿ ಕಣಿವೆಯ ದಲಿತ ಸಮುದಾಯಕ್ಕೆ ಸೇರಿದವರು. ಇವರನ್ನು ಉತ್ತರದಿಂದ ಬಂದವರು ಎಂದು ಎಲ್ಲರೂ ಹೇಳುತ್ತಾರೆ. ಮಂಟೇಸ್ವಾಮಿ, ಮಾದಪ್ಪ ಉತ್ತರದಿಂದ ಬಂದವರೋ ಅಥವಾ ನಮ್ಮ ನಾಡಿನಲ್ಲಿಯೇ ಜನಿಸಿದ ಚೇತನಗಳೋ ಎಂಬುದರ ಬಗ್ಗೆ ಸಂಶೋಧನೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಚಿಂತಕ ನಾ.ದಿವಾಕರ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಲೇಖಕ ಮದ್ದೂರು ದೊರೆಸ್ವಾಮಿ, ವಾಣಿಜ್ಯ ತೆರಿಗೆಗಳ ಇಲಾಖೆಯ ಸಹಾಯಕ ಆಯುಕ್ತ ಎಸ್. ನಾಗರಾಜು, ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ, ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಕೃಷ್ಣ ಜನಮನ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net