

ಶ್ರೀರಂಗಪಟ್ಟಣ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 81ನೇ ಜನ್ಮದಿನದ ಪ್ರಯುಕ್ತ ಆಟೋ ಹಾಗೂ ಗೂಡ್ಸ್ ವಾಹನಗಳ ಚಾಲಕರಿಗೆ ಬಿಜೆಪಿ ಯುವ ಮುಖಂಡ ಎಸ್.ಸಚ್ಚಿದಾನಂದ ಸಮವಸ್ತ್ರ ವಿತರಿಸಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರ ಭಾವಚಿತ್ರದೊಂದಿಗೆ ನೂರಾರು ಚಾಲಕರಿಗೆ ಸಿಹಿ ತಿನ್ನಿಸಿ, ಸಮವಸ್ತ್ರ ವಿತರಿಸಿದರು.
ಎಸ್.ಸಚ್ಚಿದಾನಂದ ಮಾತನಾಡಿ, ಮಂಡ್ಯ ಜಿಲ್ಲೆಯ ಹೆಮ್ಮೆಯ ಮಗನಾಗಿ ಜನಿಸಿ ರೈತ, ವಿದ್ಯಾರ್ಥಿ, ಮಹಿಳಾ ಹಾಗೂ ಸಾಮಾಜಿಕ ನ್ಯಾಯಗಳ ಪರ ದನಿಯತ್ತಿ ಹೋರಾಟ ನಡೆಸಿದ ಹುಟ್ಟು ಹೋರಾಟಗಾರ ಯಡಿಯೂರಪ್ಪ ಅವರು ಒಬ್ಬ ಧೀಮಂತ ನಾಯಕ. ರಾಜ್ಯದಲ್ಲಿ ಮೊದಲ ಭಾರಿಗೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದ ಛಲದಂಕಮಲ್ಲ. ಮುಂಬರುವ ಲೋಕಸಭಾ ಚುನಾವಣೆಯನ್ನು ಬಿಎಸ್‌ವೈ ಅವರ ಮಾರ್ಗದರ್ಶನದಲ್ಲೇ ಎದುರಿಸಿ ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲುವು ಸಾಧಿಸಲಿದೆ. ಅವರ ಬದುಕು ನಮಗೆಲ್ಲಾ ಸದಾ ಆದರ್ಶನೀಯ ಎಂದರು.
ಪುರಸಭಾ ಸದಸ್ಯರಾದ ಗಂಜಾಂ ಕೃಷ್ಣಪ್ಪ, ಗಂಜಾಂ ಶಿವು, ಎಸ್.ಪ್ರಕಾಶ್, ಎಸ್.ಟಿ.ರಾಜು, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಜಿಲ್ಲಾ ಉಪಾಧ್ಯಕ್ಷ ಮೇಳಾಪುರ ಶ್ರೀಧರ್, ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್, ಪ್ರಧಾನ ಕಾರ್ಯದರ್ಶಿ ಬಿ.ಸಿ.ಸಂತೋಷ್ ಕುಮಾರ್, ಯುವ ಮುಖಂಡ ದರ್ಶನ್ ಲಿಂಗರಾಜು, ಕೃಷ್ಣರಾಜ ಸೊಸೈಟಿ ಅಧ್ಯಕ್ಷ ಕಂಠಿ ರಘು ಜಯಂತ್, ಕುದುರೆ ರಘು ಇತರರಿದ್ದರು.