

ಬೆಂಗಳೂರು: ಸತ್ಯವಾಗಿ ಕಂಡದ್ದನ್ನು ಯಾರ ಮುಲಾಜಿಲ್ಲದೆ ಹೇಳುವಂತಹ ಗುಣವನ್ನು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು ರೂಢಿಸಿಕೊಂಡಿದ್ದರು ಎಂದು ಹಿರಿಯ ವಿದ್ವಾಂಸ ಪ್ರೊ.ಪಾದೇಕಲ್ಲು ವಿಷ್ಣು ಭಟ್ಟ ಹೇಳಿದ್ದಾರೆ.
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಕೆ.ಆರ್.ರಸ್ತೆಯ ಗಾಯನ ಸಮಾಜದಲ್ಲಿ ಶನಿವಾರ ಆಯೋಜಿಸಿದ್ದ 'ಆಚಾರ್ಯರ ಜನ್ಮಾರಾಧನೆ-88' ಕಾರ್ಯಕ್ರಮದಲ್ಲಿ ಮಾತನಾಡಿದರು. ಬನ್ನಂಜೆಯವರು ಸಾಂಪ್ರದಾಯಿಕರನ್ನು ಮಾತ್ರವಲ್ಲ, ಆಧುನಿಕವರನ್ನೂ ಟೀಕಿಸುತ್ತಿದ್ದರು. ಆದರೂ ಎರಡೂ ವರ್ಗಗಳಿಗೂ ಅವರು ಪ್ರಿಯರಾಗಿದ್ದರು ಎಂದರು.
ಹೆಬ್ರಿ ಬಳಿಯ ತಿಂಗಳೆ ಎಂಬಲ್ಲಿನ ಗರಡಿ ಉತ್ಸವದ ಪರಿಕಲ್ಪನೆಯೇ ಬದಲಾಯಿತು. ಬನ್ನಂಜೆ ಅವರು ಸುಮಾರು 44 ವರ್ಷಗಳ ಕಾಲ ಈ ಉತ್ಸವದಲ್ಲಿ ಉಪನ್ಯಾಸ ಮಾಡಿದ್ದರು. ಬನ್ನಂಜೆ ಅಂಕಣಗಳನ್ನು ಕುತೂಹಲದಿಂದ ಓದುತ್ತಿದ್ದೆವು. ಅತ್ಯಂತ ಸರಳವಾಗಿ, ಸ್ಪಷ್ಟವಾಗಿ ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಬರೆಯುತ್ತಿದ್ದರು. ಅವರ ಉಪನ್ಯಾಸ ಹಾಗೂ ಪ್ರವಚನಗಳನ್ನು ಕೇಳಲು ದೂರದ ಊರುಗಳಿಂದ ಜನರು ಬರುತ್ತಿದ್ದರು ಎಂದು ಹೇಳಿದರು.
ವಿದ್ವಾಂಸ ಶತಾವಧಾನಿ ಡಾ.ಆರ್. ಗಣೇಶ್ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ವ್ಯಕ್ತಿಗಳ ದಾಖಲೆಗಳಿಂತ ಅವರ ವಿಚಾರಗಳು ದಾಖಲೆಗಳಾಗುತ್ತಿದ್ದವು. ಇದೀಗ ಬನ್ನಂಜೆ ಅವರ ಬಗ್ಗೆ ಪುಸ್ತಕ ರೂಪದಲ್ಲಿ ದಾಖಲಾಗಿರುವುದು ಸಂತಸದ ವಿಷಯ. ಈ ಪುಸ್ತಕ ಅಪ್ಪ, ಅಮ್ಮ, ನನ್ನ ಕುಟುಂಬ, ಬಾಲ್ಯ, ಅಧ್ಯಯನ, ಸ್ವಾಮಿಗಳು, ವಿದ್ವಾಂಸರು ಹೀಗೆ 17 ಶೀರ್ಷಿಕೆಯಲ್ಲಿ ಮೂಡಿಬಂದಿದೆ. ಈ ಪುಸ್ತಕದಲ್ಲಿ ಬನ್ನಂಜೆ ವ್ಯಕ್ತಿತ್ವ ಪ್ರಾಮಾಣಿಕವಾಗಿ ಕಾಣುತ್ತದೆ. ಅವರೇ ಹೇಳಿದಂತೆ ಭಾಸವಾಗುತ್ತದೆ ಎಂದು ಹೇಳಿದರು.
ಆಚಾರ್ಯರು ಹೇಳಿದ ಆತ್ಮಕಥನ 'ಆತ್ಮನಿವೇದನೆ' ಮತ್ತು ಪಡುಮುನ್ನೂರು ನಾರಾಯಣಾಚಾರ್ಯರು 'ನನ್ನ ಪಿತಾಮಹ' ಎಂಬ ಎರಡು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಅವಧೂತ ವಿನಯ ಗುರೂಜಿ, ಕರ್ನಾಟಕ ಸಂಸತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಗೋವಿಂದಾಚಾರ್ಯರ ಪುತ್ರಿ ವೀಣಾ ಬನ್ನಂಜೆ ಇದ್ದರು.
ಶಿಕ್ಷಣ ಎಂದರೆ ಹಳ್ಳಿಗಳಿಂದ ನಗರಗಳಿಗೆ ಹೋಗುವುದಲ್ಲ. ನಗರದಿಂದ ಹಳ್ಳಿಗೆ ಬಂದಾಗ ಮಾತ್ರ ಶಿಕ್ಷಣ ಹಾಗೂ ಸಮಾಜ ಬದಲಾಗಲು ಸಾಧ್ಯ ಎಂದು ಬನ್ನಂಜೆ ಹೇಳುತ್ತಿದ್ದರು. 'ಹೆಸರಿಲ್ಲದೆ' ಸಾಕಷ್ಟು ಬರಹಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ನನ್ನ ಬರಹ ಜನರಿಗೆ ಮುಟ್ಟಬೇಕೆ ಹೊರತು ನನ್ನ ಹೆಸರಲ್ಲ ಎನ್ನುತ್ತಿದ್ದರು. ಏನಾದರೂ ಕಲಿಯಬೇಕಾದರೆ ಶೂನ್ಯದಿಂದ ಅಧ್ಯಯನವನ್ನು ಪ್ರಾರಂಭಿಸಿದಾಗ ಮಾತ್ರ ಸಂಪೂರ್ಣ ದರ್ಶನ ಆಗುತ್ತದೆ. ಪವಾಡಗಳ ಹಿಂದೆ ಹೋಗುವ ಬದಲು ಆಚಾರ-ವಿಚಾರ ತತ್ವಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎನ್ನುತ್ತಿದ್ದರು ಎಂದು ಉಡುಪಿಯ ಪ್ರಕಾಶ್ ಮಲ್ಪೆ ಸ್ಮರಿಸಿದರು.