ಆಗಸ್ಟ್ ೫ ರಿಂದ ಸಾರಿಗೆ ನೌಕರರ ಮುಷ್ಕರ / ಖಾಸಗಿ ಬಸ್ಸುಗಳನ್ನು ರಸ್ತೆಗಿಳಿಸಲು ಸಾರಿಗೆ ಇಲಾಖೆ ಮುಂದು

Published on

ವಿಜಯವಾಇ ಸುದ್ದಿಜಾಲ ಕೋಲಾರ

ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಸಾರಿಗೆ ನೌಕರರು ಆ.೫ ರಿಂದ ಅನಿರ್ದಿಷ್ಟ ಮುಷ್ಕರ ನಡೆಸಲು ಉದ್ದೇಶಿಸಿರುವುದರಿಂ ದ ಕೋಲಾರ ಜಿಲ್ಲೆಯಲ್ಲಿಯು ಆ.೫ ರಂದು ಮುಷ್ಕರ ನಡೆಸಲು ಜಿಲ್ಲಾ ಸಾರಿಗೆ ನಿಗಮ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಂದಾಗಿದೆ.

ವೇತನ ಪರಿಷ್ಕರಣೆ, ಹಿಂಬಾಕಿ ವೇತನ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸಾರಿಗೆ ನೌಕರರು ಹಲವಾರು ಬಾರಿ ಮನವಿ ಮಾಡಲಾಗಿತ್ತು. ಈ ಬಗ್ಗೆ ಸರ್ಕಾರ ನೌಕರರ ಜೊತೆ ಹಲವು ಸುತ್ತಿನ ಸಭೆ ನಡೆಸಿ, ಸಮಾಧಾನಪಡಿಸುವಲ್ಲಿ ವಿಫಲವಾಗಿದೆ. ಸರ್ಕಾರದ ಸಂಧಾನಕ್ಕೆ ಬಗ್ಗದ ನೌಕರರು ಬೇಡಿಕೆ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ.

ಆ.೪ರ ಸೋಮವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮತ್ತೊಮ್ಮೆ ಸಂಧಾನ ಸಭೆ ನಡೆಸಲು ಸರ್ಕಾರ ಮುಂದಾಗಿದ್ದು, ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಮುಷ್ಕರ ಮುಂದುವರೆಯಲಿದೆ. ನೌಕರರು ಮುಷ್ಕರ ಮುಂದಾದರೆ ಸಾರ್ವಜನಿಕರಿಗೆ ಅನಾನುಕೂಲ ತಪ್ಪಿಸಲು ಸಾರಿಗೆ ಇಲಾಖೆ ಮುಂದಾಗಿದ್ದು, ಖಾಸಗಿ ಬಸ್ಸುಗಳ ಮೊರೆ ಹೋಗಿದೆ ಎನ್ನಲಾಗಿದೆ.

ಕೋಲಾರದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಖಂಡ ಬಾಲಕೃಷ್ಣ ನೇತೃತ್ವದಲ್ಲಿ ಆ.೫ರ ಮಂಗಳವಾರ ಬೆಳ್ಳಿಗ್ಗೆ ೬ ರಿಂದ ಅನಿರ್ದಿಷ್ಟ ಮುಷ್ಕರ ಪ್ರಾರಂಭಗೊಳ್ಳಲಿದೆ. ಡಿಪೋದಿಂದ ಹೊರಡುವ ಬಸ್ಸುಗಳನ್ನು ಬಿಡದೆ ಚಾಲಕ ಮತ್ತು ನಿರ್ವಾಕರು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರದಲ್ಲಿ ಭಾಗವಹಿಸುವಂತೆ ಈಗಾಗಲೇ ನೌಕರರಿಗೆ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸೂಚನೆ ನೀಡಿದೆ.

ಕೋಟ್

ವೇತನ ಪರಿಷ್ಕರಣೆ ೨೦ ತಿಂಗಳ ಹಿಂಬಾಕಿ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ನಮ್ಮ ಮುಷ್ಕರ ಮುಂದುವರೆಯುತ್ತದೆ. ಮುಷ್ಕರದಲ್ಲಿ ಎಲ್ಲಾ ನೌಕರರು ಭಾಗವಹಿಸಲಿದ್ದಾರೆ. ಹಲವಾರು ದಿನಗಳಿಂದ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅನೇಕ ಬಾರಿ ಸರ್ಕಾರದ ಮೇಲೆ ಒತ್ತಡ ತಂದಿದ್ದರೂ ಇದುವರೆವಿಗೂ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ. ಆದ್ದರಿಂದ ಅನಿರ್ದಿಷ್ಟ ಮುಷ್ಕರವನ್ನು ಪ್ರಾರಂಭಿಸುತ್ತಿದ್ದೇವೆ.

-ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಖಂಡ ಬಾಲಕೃಷ್ಣ

ಕೋಟ್

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸೋಮವಾರ ಸಾರಿಗೆ ನೌಕರರ ಸಭೆ ನಡೆಯಲಿದೆ. ಸೋಮವಾರವೇ ನೌಕರರ ಬೇಡಿಕೆ ಇತ್ಯರ್ಥವಾಗುವ ಸಾಧ್ಯತೆ ಇದೆ. ಮುಷ್ಕರ ಮುಂದುವರೆದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಸರ್ಕಾರ ನೀಡುವ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳು ಸೇರಿದಂತೆ ಶಾಲಾ ಕಾಲೇಜು ವಾಹನಗಳು ಹಾಗೂ ಮಿನಿ ಬಸ್ಸುಗಳನ್ನು ಓಡಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತದೆ.

-ಶ್ರೀನಾಥ್, ಕೆ.ಎಸ್.ಆರ್.ಟಿ.ಸಿ. ಜಿಲ್ಲಾ ನಿಯಂತ್ರಣಾಧಿಕಾರಿ

ಚಿತ್ರ ೦೩ ಕೆ.ಎಲ್.ಆರ್. ೦೭ : ಕೆ.ಎಸ್.ಆರ್.ಟಿ.ಸಿ ಬಸ್ಸು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net