

ಸರಗೂರು: ತಾಲೂಕಿನ ಮೊಳೆಯೂರು ಅರಣ್ಯ ವಲಯ ವ್ಯಾಪ್ತಿಯ ಸೀಗವಾಡಿ ಗ್ರಾಮದಲ್ಲಿ ಗುರುವಾರ ರಾತ್ರಿ ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತ ರವಿ (40) ಮೇಲೆ ಕಾಡಾನೆ ದಾಳಿ ನಡೆಸಿ ತುಳಿದು ಸಾಯಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.
ಚಿಕ್ಕಬರಗಿ ಹೋಗುವ ರಸ್ತೆಯ ಬಳಿ ರೈಲು ಕಂಬಿ ಗೇಟ್ ನಿರ್ಮಾಣ ಮಾಡಲಾಗಿದೆ. ರಾತ್ರಿ ವೇಳೆ ಈ ಗೇಟ್ ಮುಚ್ಚದ ಕಾರಣ ಕಾಡಾನೆ ಜಮೀನಿನತ್ತ ನುಗ್ಗಿ ರೈತನನ್ನು ಬಲಿ ಪಡೆದಿದೆ. ಇದಕ್ಕೆ ಅರಣ್ಯ ಸಿಬ್ಬಂದಿ ನಿರ್ಲಕ್ಷೃವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಮೊಳೆಯೂರು ವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಹೆಡಿಯಾಲ ವಲಯ ಅರಣ್ಯಾಧಿಕಾರಿ ಪರಮೇಶ್ ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನ ಮಾಡಿದರೂ ಗ್ರಾಮಸ್ಥರು ಪಟ್ಟು ಸಡಿಲಿಸದೆ ಪ್ರತಿಭಟನೆ ಮುಂದುವರಿಸಿ ಅರಣ್ಯ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ರವಿ ಮಾತನಾಡಿ, ಅರಣ್ಯದಂಚಿನಲ್ಲಿರುವ ಸೋಲಾರ್ ವಿದ್ಯುತ್ ಸಂಪರ್ಕ ಹಾಗೂ ಕಾಡಾನೆ ಇಳಿಯುವ ಜಾಗದಲ್ಲಿ ಮಣ್ಣು ಎತ್ತಿಸಬೇಕು. ಅಲ್ಲದೆ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಾತಿನ ಚಕಮಕಿ: ಈ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ರೈತರು, ಮಹಿಳೆಯರು, ಮಕ್ಕಳು ಜಮೀನು ಮುಗಿಸಿ ಮನೆಯತ್ತ ತೆರಳುವಾಗ ಆನೆ ದಾಳಿ ನಡೆಸಿದಂತಹ ಪ್ರಕರಣಗಳು ನಡೆದಿವೆ. ಆದರೂ ಆರಣ್ಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದ ಪ್ರತಿಭಟನಾನಿರತರು ಅರಣ್ಯ ಅಧಿಕಾರಿಗಳ ವಿರುದ್ಧ ಮಾತಿನ ಚಕಮಕಿ ನಡೆಸಿದರು.
5 ಲಕ್ಷ ರೂ. ಪರಿಹಾರ ವಿತರಣೆ: ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಹಾಗೂ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್‌ಕುಮಾರ್ ಸ್ಥಳಕ್ಕೆ ಆಗಮಿಸಿ ಮೃತಪಟ್ಟ ರೈತನ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.
ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ಸಿಗಲಿದ್ದು, ತಕ್ಷಣಕ್ಕೆ 5 ಲಕ್ಷ ರೂ. ಪರಿಹಾರ ವಿತರಿಸಿದರು. ಮರಣೋತ್ತರ ಪರೀಕ್ಷೆ ವರದಿ ಬಂದ ಕೂಡಲೇ ಉಳಿದ 10 ಲಕ್ಷ ರೂ. ನೀಡಲಾಗುವುದು ಹಾಗೂ ಮೃತಪಟ್ಟ ರೈತನ ಕುಟುಂಬದ ಒಬ್ಬರಿಗೆ ಕೆಲಸ ನೀಡಲಾಗುವುದು ಎಂದು ಹೇಳಿದರು.
ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಳಿಕ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್, ಹೆಚ್ಚುವರಿ ಎಸ್ಪಿ ನಂದಿನಿ, ಡಿವೈಎಸ್ಪಿ ಮಹೇಶ್, ಹೆಡಿಯಾಲ ವಲಯ ಅಧಿಕಾರಿ ಪರಮೇಶ್, ಆರ್‌ಎಫ್‌ಒ ನಾರಾಯಣ್, ಸರಗೂರು ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್, ಸಬ್‌ಇನ್ಸ್‌ಪೆಕ್ಟರ್ ಶ್ರವಣದಾಸ ರೆಡ್ಡಿ, ರವಿಶಂಕರ್, ರಪೀಲ್ಖಾನ್, ಗ್ರಾಪಂ ಸದಸ್ಯರಾದ ದೇವದಾಸ್, ಬೆಟ್ಟಸ್ವಾಮಿ, ಹೇಮಾ ಜಿ.ನಾಯಕ, ಅಜಿತ್, ನಾಗೇಶ್, ಮುಖಂಡ ಜಿ. ಕೃಷ್ಣಪ್ಪ, ನಾಮಧಾರಿಗೌಡ ಸಂಘದ ಅಧ್ಯಕ್ಷ ಭೀಮರಾಜು, ಅಣ್ಣಯ್ಯಸ್ವಾಮಿ, ಅಭಿಕುಮಾರ್, ಬಾಡಗ ಮಾದಪ್ಪ ಹಾಜರಿದ್ದರು.