ಆಕರ್ಷಣೆ ಶಕ್ತಿ ರಂಗಭೂಮಿಗೆ ಈಗಲೂ ಇದೆ

YLP DRAMA
Published on

ಭೂಮಿಗೆ ಯಾವ ರೀತಿ ಗುರುತ್ವಾಕರ್ಷಣ ಶಕ್ತಿ ಇದೆಯೊ ಅದೇ ರೀತಿ ರಂಗಭೂಮಿಗೂ ಇದೆ. ರಂಗಭೂಮಿಯ ಆಕರ್ಷಣೆಗೆ ಒಳಗಾಗಿ ಬಂದವರು ಮತ್ತೆ ಬೇರೆ ಕಡೆ ಹೋಗುವುದೇ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಅಭಿಪ್ರಾಯಪಟ್ಟರು.

ನಗರದ ರಂಗಾಯಣದ ಕಾರಂತ ರಂಗಚಾವಡಿ ಆವರಣದಲ್ಲಿ ನಾಲ್ವಡಿ ಸೋಶಿಯಲ್, ಕಲ್ಚರಲ್ ಆ್ಯಂಡ್ ಎಜುಕೇಷನಲ್ ಟ್ರಸ್ಟ್ ವತಿಯಿಂದ ಶುಕ್ರವಾರ ‘ಅನಿಕೇತನ’ ನಾಟಕ ಆಧಾರಿತ ಉಚಿತ ರಂಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವರು ಬೇರೆ ಕ್ಷೇತ್ರಗಳಿಗೆ ಅನಿವಾರ್ಯತೆಯಿಂದ ಹೋದರು ಆಗಾಗ್ಗೆ ರಂಗಭೂಮಿಗೆ ಬಂದು ಹೋಗುತ್ತಿರುತ್ತಾರೆ. ರಂಗಭೂಮಿಯಲ್ಲಿ ಕಲಿತು ನೂರಾರು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದರೂ ಅಂತಹ ಕಲಾವಿದರು ನಾಟಕ ಪ್ರದರ್ಶನವಾಗುವ ಥಿಯೇಟರ್ ಮುಂದೆ ನಿಂತಿರುತ್ತಾರೆಯೇ ವಿನಹ ಸಿನಿಮಾ ಥಿಯೇಟರ್ ಮುಂದೆ ನಿಂತಿರುವುದಿಲ್ಲ. ರಂಗಭೂಮಿಯಲ್ಲಿ ನೇಪಥ್ಯ ಕಲಾವಿದರಾಗಿದ್ದವರೂ ಬೇರೆ ಕ್ಷೇತ್ರಗಳಿಗೆ ಹೋಗಿ ಯಶಸ್ಸು ಕಂಡಿದ್ದರೂ ರಂಗಭೂಮಿ ಕರೆದ ಕ್ಷಣ ಓಡಿ ಬರುತ್ತಾರೆ. ಅಷ್ಟು ಆಕರ್ಷಣೆ ಇದೆ ಎಂದರು.

ಇತ್ತೀಚಿಗಂತೂ ಸಣ್ಣ-ಪುಟ್ಟ ಕಾರಣಗಳಿಗೂ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡುವುದು, ಮೊಬೈಲ್ ನೋಡಬೇಡ ಎಂದ ಕಾರಣಕ್ಕಾಗಿ ಮಗನೇ ತಾಯಿಯ ಮೇಲೆ ಹಲ್ಲೆ ನಡೆಸುವಂತಹ ಘಟನೆಗಳನ್ನು ನೋಡುತ್ತಾ ಇರುತ್ತೇವೆ. ಇದಕ್ಕೆ ಕಾರಣ ಹುಡುಕಿದರೇ ಅಂತಹ ದುಷ್ಕೃತ್ಯವೆಸಗಿದವರು ಸಮಾಜದ ಜತೆ ಬೆರೆತು ಬದುಕುತ್ತಿರುವುದಿಲ್ಲ. ಅವರ ಪಾಡಿಗೆ ಅವರಿರುತ್ತಾರೆ. ಹೀಗಾಗಿ ಅವರಿಗೆ ಜೀವನ ಪಾಠ ಗೊತ್ತಿರುವುದಿಲ್ಲ. ಆದ್ದರಿಂದ ಯುವಪೀಳಿಗೆ ರಂಗಭೂಮಿಯಂತಹ ಕ್ಷೇತ್ರದಲ್ಲಿ ತೊಡಗಿಸಿಕೊಂಡರೆ ಬದುಕಿನ ಎಲ್ಲ ಆಯಾಮಗಳ ದರ್ಶನವಾಗುತ್ತದೆ. ಇದರಿಂದ ಜೀವನದ ಅರಿವು ಉಂಟಾಗುತ್ತದೆ ಎಂದರು.

ರಂಗಭೂಮಿ ಹಿರಿಯ ಕಲಾವಿದ ಶಿವಾಜಿ ರಾವ್ ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಂಗ ಕರ್ಮಿ ಬಿ.ಎಂ.ರಾಮಚಂದ್ರ, ನಾಲ್ವಡಿ ಟ್ರಸ್ಟ್ ಅಧ್ಯಕ್ಷ ದಿನೇಶ್ ಚಮ್ಮಾಳಿಗೆ, ಗೌತಮ ಟ್ರಸ್ಟ್‌ನ ಕೃಷ್ಣಮೂರ್ತಿ ತಲಕಾಡು, ಉದಯೋನ್ಮುಖ ಕಲಾವಿದ ಜಗದೀಶ್ ಕಾರ್ತಿಕ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net