ಆಂಧ್ರ ಗಡಿಯಲ್ಲಿ ಕೆಜಿಎಫ್ ಮಾರುಕಟ್ಟೆ: ಭೂಗಳ್ಳರಲ್ಲಿ ಆತಂಕ, ಸ್ಥಳದಲ್ಲೇ ಹಾಜರಿದ್ದು ಸರ್ವೇ ಮುಗಿಸಿದ ಶಾಸಕಿ ರೂಪಕಲಾ

21 betamangala MLA
Published on

ಬೇತಮಂಗಲ: ಆಂಧ್ರದ ಗಡಿಗೆ ಹೊಂದಿಕೊಂಡಂತಿರುವ ಎನ್.ಜಿ.ಹುಲ್ಕೂರು ಬಳಿ ಕೆಜಿಎಫ್ ತಾಲೂಕಿಗೆ ಕೃಷಿ ಉತ್ಪನ್ನ ವಾರುಕಟ್ಟೆ ನಿರ್ಮಿಸಲು ಶಾಸಕಿ ಎಂ.ರೂಪಕಲಾ ಮುಂದಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಜಮೀನುಗಳಿಗೆ ಬೇಲಿ ಸುತ್ತಿಕೊಂಡಿರುವ, ಅಕ್ರಮವಾಗಿ ಗೋವಾಳ ಬರೆಸಿಕೊಂಡಿರುವ ಭೂಗಳ್ಳರಲ್ಲಿ ನಡುಕ ಶುರುವಾಗಿದೆ.

ಬೆಂಗಳೂರು-ಚೆನ್ನೆ ಕಾರಿಡಾರ್ ಸಹ ಇದೇ ಭಾಗದಲ್ಲಿ ಹಾದು ಹೋಗುತ್ತಿದೆ. ಇಲ್ಲಿ ನೂರಾರು ಎಕರೆ ಸರ್ಕಾರಿ ಭೂಮಿಯಿದೆ. ಇದರ ಮೇಲೆ ಕಣ್ಣು ಹಾಕಿರುವ ಆಂಧ್ರ ಮತ್ತು ನಮ್ಮ ರಾಜ್ಯದ ಹಣವಂತರು ಅಧಿಕಾರಿಗಳಿಗೆ ಲಂಚ ನೀಡಿ ಹಲವು ವರ್ಷಗಳ ಹಿಂದೆ ಹಕ್ಕುಪತ್ರ ವಿತರಿಸಿದಂತೆ ದಾಖಲೆ ಸಷ್ಟಿಸಿದ್ದಾರೆ. ಇನ್ನು ಕೆಲವರು ಪಿ-ನಂಬರ್‌ಗಳಿದ್ದರೂ ಕೆಲವು ರೈತರಿಂದ ಅಗ್ರಿಮೆಂಟ್ ಹಾಕಿಸಿಕೊಂಡಿದ್ದಾರೆ. ಏನಾದರು ವಾಡಿ ಒಂದಷ್ಟು ಜಮೀನು ವಾಡಿದರೆ ಇಲ್ಲಿ ಮುಂದೊಂದು ದಿನ ಚಿನ್ನದಂಥ ಬೆಲೆ ಬಂದು ಕುಬೇರರಾಗಬಹುದು ಎಂಬ ಆಸೆಯಿಂದ ಲಕ್ಷಗಟ್ಟಲೆ ಹಣ ಸುರಿದು ವಾಲೀಕರಾಗಲು ಕಾದು ಕುಳಿತಿದ್ದಾರೆ ಎನ್ನಲಾಗಿದೆ.

ಎನ್.ಜಿ. ಹುಲ್ಕೂರು ವ್ಯಾಪ್ತಿಯ ಕದರಿಗಾನಕುಪ್ಪ ಸ.ನಂ.3ರಲ್ಲಿನ ಒಟ್ಟು 40 ಎಕರೆ ಸರ್ಕಾರಿ ಜಮೀನಿನಲ್ಲಿ ಮಾರುಕಟ್ಟೆ ನಿರ್ಮಿಸಲು ಪೂರ್ವ ತಯಾರಿ ನಡೆಸಲಾಗಿದೆ. ವಾರುಕಟ್ಟೆಗೆ ಗುರುತಿಸಿರುವ ಜಾಗದಲ್ಲಿ ಸರ್ವೇ ಕೈಗೊಂಡಿದ್ದಾಗ ಸ್ಥಳದಲ್ಲೇ ಶಾಸಕಿ ಹಾಜರಿದ್ದು, ಸರ್ವೇ ಯಶಸ್ವಿಯಾಗುವಂತೆ ನೋಡಿಕೊಂಡಿದ್ದಾರೆ. ಇದರಿಂದ ಕಂಗಾಲಾಗಿರುವ ಭೂಗಳ್ಳರು, ಇನ್ನೂ ಯಾವುದಾದರು ಸರ್ಕಾರಿ ಯೋಜನೆ ತಂದು ಇಲ್ಲಿ ಭೂಮಿ ಪಡೆದರೆ ನಮ್ಮ ಹೂಡಿಕೆ ಮಣ್ಣುಪಾಲಾಗಲಿದೆ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಕಂದಾಯ ಅಧಿಕಾರಿಗಳು ಆಸೆ-ಆಮಿಷಗಳಿಗೆ ಬಲಿಯಾಗಿ ನೂರಾರು ಎಕರೆ ಸರ್ಕಾರಿ ಭೂಮಿಯನ್ನು ಆಂಧ್ರದವರ ಕೈಸೇರುವಂತೆ ಧಾರೆ ಎರೆದಿದ್ದಾರೆ. ಈ ಬಗ್ಗೆ ಶಾಸಕಿ ರೂಪಕಲಾಗೆ ಸಾಕಷ್ಟು ದೂರು ಬಂದಿದ್ದವು. ಇದನ್ನು ಗಮನದಲ್ಲಿಟ್ಟುಕೊಂಡು ಸುಸಜ್ಜಿತ ವಾರುಕಟ್ಟೆ ನಿರ್ವಾಣಕ್ಕೆ ಸರ್ಕಾರಿ ಜಮೀನು ಆರಿಸಿಕೊಂಡಿದ್ದಾರೆ. ಶಾಸಕಿ ನಿರ್ಧಾರಕ್ಕೆ ರೈತರು ಮತ್ತು ಮುಖಂಡರಿಂದ ಪ್ರಶಂಸನೀಯ ವಾತುಗಳೂ ಕೇಳಿ ಬರುತ್ತಿವೆ.

150ರಲ್ಲಿ ಉಳಿದಿದ್ದು 50 ಎಕರೆ: ಆಂಧ್ರ ಗಡಿಭಾಗದ ಪಂಥನಹಳ್ಳಿಯ ಸ.ನಂ.92ರಲ್ಲಿ 150 ಎಕರೆ ಸರ್ಕಾರಿ ಜಮೀನಿತ್ತು. ಇದೀಗ ಕೇವಲ 50 ಎಕರೆ ಉಳಿದಿದೆ. ಅದೂ ಒತ್ತುವರಿಯಾಗಿದ್ದು ಕೋರ್ಟ್ ಮೆಟ್ಟಿಲೇರಿದೆ. ಎನ್‌ಜಿ ಹುಲ್ಕೂರು ಗ್ರಾಪಂ ವ್ಯಾಪ್ತಿಯ ಹುಲ್ಕೂರು, ಕದಿರಿಗಾನಕುಪ್ಪ, ಸ್ವರ್ಣಕುಪ್ಪಾ, ಬಲಿಜಿಪಲ್ಲಿ ಮತ್ತಿತರೆಡೆ ಇದ್ದ ಗೋವಾಳ, ಗುಂಡುತೋಪು, ಗೋಕುಂಟೆ ಸೇರಿ ಸುವಾರು 500 ಎಕರೆ ಸರ್ಕಾರಿ ಭೂಮಿ ಪೈಕಿ 200ಕ್ಕೂ ಹೆಚ್ಚು ಎಕರೆ ಭೂಗಳ್ಳರ ಪಾಲಾಗಿದೆ. ಕೆಲವು ರೈತರಿಗೆ ಸಾಗುವಳಿ ಚೀಟಿ ನೀಡಲಾಗಿದೆ. ಇದೀಗ ಉಳಿದಿರುವ ಭೂಮಿಯಲ್ಲಿ ವಾರುಕಟ್ಟೆ ಮತ್ತು ಇತರ ಸಾರ್ವಜನಿಕ ಉದ್ದೇಶಗಳಿಗೆ ಬಳಸಿಕೊಳ್ಳಲು ಮತ್ತು ಸರ್ಕಾರಿ ಭೂಮಿ ಉಳಿಸಿಕೊಳ್ಳಲು ಶಾಸಕಿ ರೂಪಕಲಾ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಅದೇ ರೀತಿ ತಾಲೂಕಿನಲ್ಲಿರುವ ಸರ್ಕಾರಿ ಭೂಮಿ ಗುರುತಿಸಿ ಉಳಿಸುವ ಜತೆಗೆ, ಸಾಗುವಳಿಗಾಗಿ ಅರ್ಜಿ ಹಾಕಿರುವ ರೈತರು ಮತ್ತು ವಸತಿ ಇಲ್ಲದ ನಿರ್ಗತಿಕರಿಗೆ ಹಂಚಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸರ್ಕಾರಿ ಭೂಮಿ ಉಳಿಸುವ ಜತೆಗೆ ಎಪಿಎಂಸಿ ವಾರುಕಟ್ಟೆ, ನಿರ್ಗತಿಗರಿಗೆ ನಿವೇಶನ ಹಂಚಿಕೆ ಮತ್ತು ಭೂಮಿ ಇಲ್ಲದವರಿಗೆ ದರಕಾಸ್ತು ಸಮಿತಿ ವತಿಯಿಂದ ಭೂಮಿ ವಿತರಿಸುವುದೇ ನನ್ನ ಗುರಿಯಾಗಿದೆ. ಎಂ.ರೂಪಾಕಲಾ, ಶಾಸಕಿ ಆಂಧ್ರ-ಕರ್ನಾಟಕ ಗಡಿಭಾಗದಲ್ಲಿ ವಾರುಕಟ್ಟೆ ನಿರ್ವಾಣವಾದರೆ ಕೆಜಿಎಫ್, ಬಂಗಾರಪೇಟೆ ಮತ್ತು ಮುಳಬಾಗಿಲು ತಾಲೂಕಿನ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ. ಒತ್ತುವರಿಯಾಗಿರುವ ಸರ್ಕಾರಿ ಭೂಮಿ ಉಳಿಸಿಕೊಳ್ಳಲು ಶಾಸಕಿ ಮುಂದಾಗಬೇಕಾಗಿದೆ. ಎಂಬಿಎ ಕಷ್ಣಪ್ಪ, ಜೀಡವಾಕನಹಳ್ಳಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net