

| ಸ.ದಾ. ಜೋಶಿ ಕಲಬುರಗಿ
ಮೇ ತಿಂಗಳಲ್ಲಿ ನಡೆಯಲಿರುವ ಪದವೀಧರ ಪ್ರಾಥಮಿಕ ಶಾಲಾ (6-8ನೇ ತರಗತಿ) ಶಿಕ್ಷಕರ ನೇಮಕ ಸಂಬಂಧ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಇಂಗ್ಲಿಷ್ ವಿಷಯ ಬೋಧಕರ ಸಂಖ್ಯೆಯನ್ನು ಗಣನೀಯ ಇಳಿಕೆ ಮಾಡಿದೆ. ಈ ಮೂಲಕ ಕಲ್ಯಾಣ ಕರ್ನಾಟಕದ ಶಿಕ್ಷಕ ಆಕಾಂಕ್ಷಿಗಳಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ.
ಸರ್ಕಾರಿ ಶಾಲೆಗಳಲ್ಲಿ ಖಾಲಿಯಿರುವ ಇಂಗ್ಲಿಷ್ ಸೇರಿ ವಿವಿಧ ವಿಷಯಗಳ 15 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿದೆ. ಇದರಲ್ಲಿ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ 5000 ಹುದ್ದೆ ಹಂಚಿಕೆ ಮಾಡಲಾಗಿದೆ. ಸೋಮವಾರ (ಮಾ.21) ಅಧಿಸೂಚನೆ ಪ್ರಕಟವಾಗಿದ್ದು, 23ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಸರ್ಕಾರ ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ವಿಷಯವಾರು ಭರ್ತಿ ಮಾಡಿಕೊಳ್ಳುವ ಒಟ್ಟು ಸಂಖ್ಯೆಗಳ ವಿವರ ನೀಡಿದ್ದು, ಇದರಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ತಗ್ಗಿವೆ. ಇದು ಕಲ್ಯಾಣ ಕರ್ನಾಟಕದವರಿಗೆ ಸರ್ಕಾರ ಮಾಡಿದ ಮತ್ತೊಂದು ಅನ್ಯಾಯ ಎಂಬ ಆರೋಪ ಕೇಳಿಬರುತ್ತಿದೆ.
ಕಕ ಸೇರಿ ರಾಜ್ಯದ ಎಲ್ಲ ಕಡೆಗಳಲ್ಲೂ ಇಂಗ್ಲಿಷ್ ಶಿಕ್ಷಕರ ಕೊರತೆ ಅಧಿಕವಾಗಿದೆ. 2018-19ರಲ್ಲಿ ನಡೆದ ನೇಮಕ ವೇಳೆ ಇಂಗ್ಲಿಷ್ ಶಿಕ್ಷಕರ ಒಟ್ಟು ಖಾಲಿ ಸಂಖ್ಯೆಯಲ್ಲಿ ಶೇ.20 ಸಹ ಭರ್ತಿ ಆಗಿಲ್ಲ. ಹೀಗಾಗಿ ಈ ಬಾರಿ ನಮಗೆ ಜಾಸ್ತಿ ಅವಕಾಶಗಳಿದ್ದು, ನೌಕರಿ ಬಂಪರ್ ಇದೆ ಎಂಬ ಖುಷಿಯಲ್ಲಿದ್ದ ಇಂಗ್ಲಿಷ್ ವಿಷಯ ಶಿಕ್ಷಕ ಅಭ್ಯರ್ಥಿಗಳು, ಈಗ ಸರ್ಕಾರ ನೀಡಿದ ಒಟ್ಟು ಸಂಖ್ಯೆ ನೋಡಿ ಬೆಚ್ಚಿ ಬಿದ್ದಿದ್ದಾರೆ. ಈ ಪಟ್ಟಿ ಸಮರ್ಪಕವಿಲ್ಲ ಎಂದು ತಗಾದೆ ಎತ್ತಿ ಪರಿಷ್ಕೃತ ಪಟ್ಟಿ ಸಿದ್ಧಪಡಿಸಲು ಆಗ್ರಹಿಸಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲೇ ಬೀದರ್ ಜಿಲ್ಲೆಯಲ್ಲಿ ಅತಿ ಕಮ್ಮಿ 30 ಇಂಗ್ಲಿಷ್ ಶಿಕ್ಷಕರ ಹುದ್ದೆ ಖಾಲಿ ತೋರಿಸಲಾಗಿದೆ. ಕಲಬುರಗಿ 40, ಯಾದಗಿರಿ 53, ರಾಯಚೂರು 31, ಬಳ್ಳಾರಿ 56, ಕೊಪ್ಪಳ ಜಿಲ್ಲೆಗೆ 33 ಆಂಗ್ಲ ಬೋಧಕರ ಹುದ್ದೆ ನಿಗದಿಪಡಿಸಲಾಗಿದೆ. 2018-19ರಲ್ಲಿ ತೋರಿಸಿದ ಇಂಗ್ಲಿಷ್ ಶಿಕ್ಷಕರ ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ 2096 ಇತ್ತು. ಇದರಲ್ಲಿ 381 ಹುದ್ದೆ ತುಂಬಲಾಗಿದೆ. ಹಿಂದಿನ ಲೆಕ್ಕಾಚಾರ ಮತ್ತು ಈಗ ಪ್ರಸ್ತಾಪಿಸಿದ ಸಂಖ್ಯೆಗೆ ಹೋಲಿಸಿದರೆ ಒಂದು ಸಾವಿರಕ್ಕೂ ಹೆಚ್ಚು ಹುದ್ದೆ ಕಡಿತಗೊಳಿಸಲಾಗಿದೆ. ಸಂವಿಧಾನದ 371(ಜೆ) ಅನ್ವಯ ಈ ಭಾಗದಲ್ಲಿ ನೇಮಕಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು. ಅದರ ಬದಲು ನಾಮ್ೇವಾಸ್ತೆ ಎಂಬಂತೆ ಹುದ್ದೆ ಭರ್ತಿ ಮಾಡುತ್ತಿರುವುದು ಸಲ್ಲದು. ಇದು ಈ ಭಾಗದವರ ಮೇಲೆ ಮಾಡುತ್ತಿರುವ ಘೊರ ಅನ್ಯಾಯ ಎಂಬುದು ಅಭ್ಯರ್ಥಿಗಳ ಅಳಲು.
ಗೊಂದಲ ಸೃಷ್ಟಿಸಿದ ಸಂಖ್ಯೆ: 2018-19ರ ನೇಮಕ ವೇಳೆಗಿನ ಹಾಗೂ ಈಗಿನ ಇಂಗ್ಲಿಷ್ ಶಿಕ್ಷಕರ ಖಾಲಿ ಹುದ್ದೆಗಳ ಸಂಖ್ಯೆ ಗೊಂದಲ ಸೃಷ್ಟಿಸಿದೆ. ಇದು ಸರ್ಕಾರದ ಬಗ್ಗೆ ಶಿಕ್ಷಕ ಆಕಾಂಕ್ಷಿಗಳ ಅನುಮಾನ ಹೆಚ್ಚಿಸಿದೆ. 2018-19ರಲ್ಲಿ ಅಧಿಸೂಚನೆ ಹೊರಡಿಸಿದಾಗ ಬೀದರ್ ಜಿಲ್ಲೆಯಲ್ಲೇ 312 ಇಂಗ್ಲಿಷ್ ಹುದ್ದೆ ಖಾಲಿಯಿದ್ದವು. ಇದರಲ್ಲಿ ಸಿಇಟಿ ಮೂಲಕ ನಡೆದ ಆಯ್ಕೆಯಲ್ಲಿ ಕೇವಲ 24 ಮಂದಿ ಪಾಸಾಗಿದ್ದರು. ನಿಯಮದ ಪ್ರಕಾರ ಬಡ್ತಿ ಮೂಲಕ ಕೆಲ ಹುದ್ದೆ ಭರ್ತಿ ಮಾಡಿದರೂ ಈಗ ಕನಿಷ್ಠ 200 ಹುದ್ದೆ ಜಿಲ್ಲೆಗೆ ಸಿಗಬೇಕು. ಆದರೆ ಕೇವಲ 30 ಹುದ್ದೆ ನಿಗದಿ ಮಾಡಿರುವುದು ಎಷ್ಟು ಸರಿ ಎಂಬುದು ಅಭ್ಯರ್ಥಿಗಳಾದ ಮಾಣಿಕರಾವ ಪಾಟೀಲ್, ಶಿವಕುಮಾರ ಅಲ್ಮಾಜೆ, ವಿನೋದ ಭಂಗೂರ, ಪ್ರಕಾಶ ಮಾಳೆಗಾಂವ, ವೀರಶೆಟ್ಟಿ ಇತರರ ಪ್ರಶ್ನೆ. ಕಕ ಭಾಗದ ಉಳಿದ ಜಿಲ್ಲೆಯವರ ಗೋಳು ಸಹ ಇದಕ್ಕೆ ಭಿನ್ನವಿಲ್ಲ.
ಇಂಗ್ಲಿಷ್ ಶಿಕ್ಷಕರ ಹುದ್ದೆ ಗಣನೀಯ ಕಡಿತಗೊಳಿಸಿ ಅನ್ಯಾಯ ಮಾಡಲಾಗಿದೆ ಎಂದು ಬೀದರ್ ಜಿಲ್ಲೆಯ ಹಲವಾರು ಅಭ್ಯರ್ಥಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಈ ಕುರಿತು ಸಂಬಂಧಿತರಿಂದ ಮಾಹಿತಿ ಪಡೆಯಲಾಗುತ್ತಿದೆ. ಅನ್ಯಾಯ ಆಗಿದ್ದು ಕಂಡಲ್ಲಿ ಸದನದಲ್ಲಿ ವಿಷಯ ಪ್ರಸ್ತಾಪಿಸುವೆ. ನಮ್ಮ ಭಾಗದವರಿಗೆ ನ್ಯಾಯ ಒದಗಿಸಲು ಹೋರಾಡುವೆ.
| ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷ
ಸರ್ಕಾರ ಸಿದ್ಧಪಡಿಸಿದ ಈಗಿನ ಪಟ್ಟಿ ಇಂಗ್ಲಿಷ್ ಶಿಕ್ಷಕರಾಗುವವರ ಕನಸಿನ ಮೇಲೆ ತಣ್ಣೀರೆರಚಿದೆ. ಇದು ಅವೈಜ್ಞಾನಿಕ ಕ್ರಮ. ತಕ್ಷಣ ಈ ಪಟ್ಟಿ ಕೈಬಿಟ್ಟು ಪರಿಷ್ಕೃತ ಪಟ್ಟಿ ಬಿಡುಗಡೆ ಮಾಡಬೇಕು. 371(ಜೆ) ಅನ್ವಯ ನಮ್ಮ ಭಾಗದ ಹಿಂಬಾಕಿ ಸೇರಿ ಇಂಗ್ಲಿಷ್ ವಿಷಯದ ಎಲ್ಲ ಹುದ್ದೆಗಳನ್ನು ತುಂಬಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ.
| ಮಾಣಿಕರಾವ ಪಾಟೀಲ್ ಖಾನಾಪುರ ಇಂಗ್ಲಿಷ್ ಶಿಕ್ಷಕ ಆಕಾಂಕ್ಷಿ ಅಭ್ಯರ್ಥಿ