ಅಸ್ವಸ್ಥಗೊಂಡಿದ್ದ ಮಕ್ಕಳು ಗುಣಮುಖ: ಆಸ್ಪತ್ರೆಗೆ ಜನಪ್ರತಿನಿಧಿಗಳ ಭೇಟಿ, ಪ್ರಸಾದ ತಯಾರಿಸಿದ ಇಬ್ಬರ ಬಂಧನ

2 Srinivaspur 1
Published on

ಶ್ರೀನಿವಾಸಪುರ: ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಆರೋಗ್ಯವನ್ನು ಭಾನುವಾರ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು.

ಶ್ರೀನಿವಾಸಪುರ ತಾಲೂಕು ಬೀರಗಾನಹಳ್ಳಿಯಲ್ಲಿ ಶನಿವಾರ ಗ್ರಾಮದೇವತೆ ಗಂಗಮ್ಮ ದೇವಿಗೆ ವಿಶೇಷಪೂಜೆ ಕಾರ್ಯಕ್ರಮದಲ್ಲಿ ತಯಾರಿಸಿದ್ದ ಪ್ರಸಾದ ಸೇವಿಸಿ ಮಕ್ಕಳು ಸೇರಿ 53 ಮಂದಿ ಅಸ್ವಸ್ಥರಾಗಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ 31 ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆದು, ಭಾನುವಾರ ಗುಣಮುಖರಾಗಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 5 ಮಂದಿಯೂ ಗುಣಮುಖರಾಗಿದ್ದು, ಉಳಿದವರು ಶನಿವಾರವೇ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ವಾಪಸಾಗಿದ್ದರು.

ಪ್ರಸಾದ ತಯಾರಿಸಿದ್ದ ರೆಡ್ಡಪ್ಪ ಮತ್ತು ಶ್ರೀನಿವಾಸಮೂರ್ತಿ ವಿರುದ್ಧ ಪೊಲೀಸರು ದೂರು ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ. ಭಾನುವಾರ ಶಾಸಕ ರಮೇಶ್‌ಕುಮಾರ್ ಹಾಗೂ ಮಾಜಿ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಪ್ರತ್ಯೇಕವಾಗಿ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಯೋಗಕ್ಷೇಮ ವಿಚಾರಿಸಿದರು.

ಶಾಸಕ ರಮೇಶ್‌ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಸಮಯಕ್ಕೆ ಸರಿಯಾಗಿ ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿ ಅನಾಹುತ ನಡೆಯದಂತೆ ಕರ್ತವ್ಯ ನಿರ್ವಹಿಸಿದೆ ಎಂದು ವೈದ್ಯರು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಪ್ರಸಾದದಲ್ಲಿ ಅವಧಿ ಮುಗಿದಿರುವ ಪದಾರ್ಥಗಳು ಬಳಕೆಯಾದಂತೆ ಕಂಡುಬಂದಿದೆ. ಇದರಿಂದ ವ್ಯತ್ಯಾಸ ಉಂಟಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದರು.

ಡಯಾಲಿಸಿಸ್ ಕೇಂದ್ರ, ಕರೊನಾ ಟೆಸ್ಟಿಂಗ್ ಕೇಂದ್ರ ಮತ್ತು ಆಕ್ಸಿಜನ್ ಉತ್ಪಾದನಾ ಕೇಂದ್ರಗಳನ್ನು ವೀಕ್ಷಿಸಿ ಸೌಲಭ್ಯ ಹಾಗೂ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ವಿ.ಸುಧಾಕರ್, ಮಾಜಿ ನಿರ್ದೇಶಕ ವಿ.ಅಯ್ಯಪ್ಪ, ಮುಖಂಡ ಸಂಜಯ್‌ರೆಡ್ಡಿ ಮತ್ತಿತರರಿದ್ದರು.

3ನೇ ಅಲೆ ಎದುರಿಸಲು ಸಿದ್ಧರಾಗಿ: ಮಕ್ಕಳ ಆರೋಗ್ಯ ವಿಚಾರಿಸಿದ ನಂತರ ಡಿಎಚ್‌ಒ ಜಗದೀಶ್ ಮತ್ತು ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ತೆ ಸಭೆ ನಡೆಸಿದ ಶಾಸಕ ರಮೇಶ್‌ಕುಮಾರ್ ಕರೊನಾ ಮೂರನೇ ಅಲೆ ಬೇರೆ ಬೇರೆ ರೂಪಾಂತರಗಳಲ್ಲಿ ಬರುತ್ತಿದೆ ಎಂದು ತಜ್ಞರು ಹೇಳುತ್ತಿದ್ದು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆ ಸಜ್ಜುಗೊಳಿಸಬೇಕು. ಐಸಿಯು ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ನಿರ್ಮಿತಿ ಕೇಂದ್ರದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಶೀಘ್ರ ಕಾಮಗಾರಿ ಮುಗಿಸಬೇಕು. ಈ ಹಿಂದೆ ಕರೊನಾ ಸೋಂಕಿತರಿಗಾಗಿ ಕಾಯ್ದಿರಿಸಿದ್ದ ವಸತಿ ನಿಲಯಗಳನ್ನು ಕಾಯ್ದಿರಿಸಿ ಎಂದು ಸೂಚನೆ ನೀಡಿದರು.

ಆಸ್ಪತ್ರೆಗೆ ಶನಿವಾರ ದಾಖಲಾಗಿದ್ದ 19 ಮಕ್ಕಳು ಸೇರಿ 31 ಮಂದಿ ಅಸ್ವಸ್ಥರು ಗುಣಮುಖರಾಗಿದ್ದಾರೆ. ಎಲ್ಲರೂ ಆಸ್ಪತ್ರೆಯಿಂದ ಮನೆಗಳಿಗೆ ತೆರಳಿದ್ದಾರೆ. ಬೀರಗಾನಹಳ್ಳಿಯಲ್ಲಿ ವೈದ್ಯಕೀಯ ಸಿಬ್ಬಂದಿ ಬೀಡು ಬಿಟ್ಟಿದ್ದು, ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಡಾ.ಶ್ರೀನಿವಾಸ್, ಆಸ್ಪತ್ರೆ ಆಡಳಿತಾಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net