

ಚನ್ನಪಟ್ಟಣ: ರೈತರನ್ನು ಕಡೆಗಣಿಸುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಪಾಠ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದು ರೈತ ಮುಖಂಡ ವಿಠಲೇನಹಳ್ಳಿ ಹೊಂಬಾಳೇಗೌಡ ಹೇಳಿದರು.
ತಾಲೂಕಿನ ಕನ್ನಮಂಗಲ ಕಂತೆಸ್ವಾಮಿ ಮತ್ತು ಮಂಟೇಸ್ವಾಮಿ ದೇವಾಲಯ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರೈತ ಸಂಘಟನಾ ಕಾರ್ಯಕ್ರಮದಲ್ಲಿ ಮಾತನಾಡಿ, 80ರ ದಶಕದ ರೈತ ಸಂಘಟನೆಗಳು ಮತ್ತೆ ಮರುಕಳಿಸುತ್ತಿವೆ. ತಾಲೂಕಿನಲ್ಲಿ ರೈತಸಂಘ, ಸಮಾನ ಮನಸ್ಕರ ಸಹಭಾಗಿತ್ವ ಸಂಘಟನೆ ನಲವತ್ತು ಗ್ರಾಮಗಳಲ್ಲಿ ಉದಯವಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರ ಕೆಲಸ ಮಾಡಿಕೊಡುವಲ್ಲಿ ಅಸಡ್ಡೆ ತೋರುವ ಅಧಿಕಾರಿಗಳಿಗೆ ತಕ್ಕಪಾಠ ಕಲಿಸಲಾಗುವುದು ಎಂದರು.
ರೈತ ಮುಖಂಡ ಸಿ. ಪುಟ್ಟಸ್ವಾಮಿ ಮಾತನಾಡಿ, ಶಾಲು ಹಾಕಿಕೊಳ್ಳುವುದು ಎಂದರೆ ಅದೊಂದು ಜವಾಬ್ದಾರಿ, ಸಂಘಟನೆಗೆ ಬೇಕಾಗಿರುವುದು ಶಿಸ್ತು ಮತ್ತು ಪ್ರಾಮಾಣಿಕತೆ. ಅನ್ಯಾಯದ ವಿರುದ್ಧ ಸಿಡಿದೇಳಲು ಇದೊಂದು ಸದವಕಾಶ. ಸಂಘಟನೆಗೆ ಸೇರುವ ಮೂಲಕ ಅನ್ಯಾಯದ ವಿರುದ್ಧ ಹೋರಾಡಲು ಪ್ರಬಲ ಅಸ್ತ್ರ ಸಿದ್ಧವಾಗಿದೆ. ಶ್ರಮಜೀವಿವಗಳ ಬದುಕು ಹಿಂಡುತ್ತಿರುವ ಬಂಡವಾಳಶಾಹಿಗಳ ನಾಟಕಕ್ಕೆ ತೆರೆ ಎಳೆಯುವ ಕಾಲ ಬಂದಿದೆ. ಕೆಲವರು ರೈತರ ಹೆಸರು ಹೇಳಿಕೊಂಡು, ಶಾಲು ಹಾಕಿಕೊಂಡು ಕೊಡಲಿ ಪೆಟ್ಟು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಂಡು, ಚಳವಳಿ ರೂಪಿಸೋಣ. ಅಹಿಂಸಾ ಮಾರ್ಗದಲ್ಲಿ ಸಂವಿಧಾನ ಹಾದಿಯಲ್ಲಿ ರೈತ ಚಳವಳಿ ಮುನ್ನಡೆಸಿ, ರೈತ ಸಂಕಷ್ಟ ನೀಗಿಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಕನ್ನಮಂಗಲ ಮತ್ತು ಅಂಗರಹಳ್ಳಿ ಗ್ರಾಮಗಳ ನಲವತ್ತಕ್ಕೂ ಹೆಚ್ಚು ಜನ ಸಮಾನ ಮನಸ್ಕರ ರೈತ ಸಂಘಟನೆಗೆ ಸೇರ್ಪಡೆಗೊಂಡರು.
ರೈತಸಂಘ ಸಮಾನ ಮನಸ್ಕ ಬಳಗದ ನಂಜಪ್ಪ, ಶಶಿಕುಮಾರ್, ಮಹೇಶ್ ನಾಗೇಶ್, ಗೋರಾನ ಶ್ರೀನಿವಾಸ, ರಾಂಪುರ ಧರಣೀಶ್, ರಾಂಪುರ ಗ್ರಾಪಂ ಉಪಾಧ್ಯಕ್ಷ ಕನ್ನಮಂಗಲ ಯೋಗಲಿಂಗು ಇತರರಿದ್ದರು.