ಅವಕಾಶ ಸಿಗುವವರೆಗೆ ಕಾಯುವ ತಾಳ್ಮೆ ಇರಲಿ - ಪೃಥ್ವಿ ರಮೇಶ ಕತ್ತಿ

111
Published on

ಹುಕ್ಕೇರಿ: ತಾಳಿದವನು ಬಾಳಿಯಾನು ಎಂಬ ನಾಣ್ಣುಡಿಯಂತೆ ರಾಜಕೀಯದಲ್ಲಿ ಅವಕಾಶ ದೊರೆಯುವವರೆಗೆ ಕಾಯುವ ತಾಳ್ಮೆ ಇರಬೇಕೆಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ರಮೇಶ ಕತ್ತಿ ಹೇಳಿದರು.

ಪಟ್ಟಣದ ವಿದ್ಯುತ್ ಸಹಕಾರಿ ಸಂಘದ ನೌಕರರ ಕಾಲನಿಯ ವಿನಾಯಕ ಮಂದಿರದ 35ನೇ ವಾರ್ಷಿಕೋತ್ಸವದಲ್ಲಿ ಹಿರಾ ಶುಗರ್ ನೂತನ ನಿರ್ದೇಶಕರನ್ನು ಸತ್ಕರಿಸಿ ಮಾತನಾಡಿದ ಅವರು, ಪಟ್ಟಣದ ಅಶೋಕ ಪಟ್ಟಣಶೆಟ್ಟಿ ಮತ್ತು ಕೊಟಬಾಗಿ ಗ್ರಾಮದ ಬಸವರಾಜ ಮರಡಿ ಅವರು ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಾಗೂ ಸುರೇಶ ದೊಡ್ಡಲಿಂಗನವರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರೂ ಕಳೆದ ಐದು ವರ್ಷ ಯಾವುದೇ ಸಂಘ-ಸಂಸ್ಥೆಗಳ ಪದಾಧಿಕಾರಿಗಳಾಗಲಿಲ್ಲ. ಆದಾಗ್ಯೂ ಅಧಿಕಾರ ದೊರಕಿಲ್ಲವೆಂದು ಮುನಿಸು ತೋರಲಿಲ್ಲ. ಕೇವಲ ಕತ್ತಿ ಸಹೋದರರ ಬೆಂಬಲಿಗರಾಗಿ ಉಳಿದರು.

ಇದೀಗ ಅವರನ್ನು ಸಚಿವ ಉಮೇಶ ಕತ್ತಿ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರು ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಅವಿರೋಧವಾಗಿ ನಿರ್ದೇಶಕರನ್ನಾಗಿ ಮಾಡಿದರು. ಐದು ವರ್ಷ ಅಧಿಕಾರದಿಂದ ದೂರವುಳಿದರೂ ಅವರಿಗೆ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಗೆ ನಿರ್ದೇಶಕರಾಗುವ ಯೋಗ ಒದಗಿ ಬಂದಿದೆ ಎಂದರು.

ಅಧಿಕಾರದ ಬೆನ್ನತ್ತಿ ಹೋಗುವುದಕ್ಕಿಂತ ಅಧಿಕಾರ ನಮ್ಮನ್ನು ಹುಡುಕಿಕೊಂಡು ಬರುವವರೆಗೆ ತಾಳ್ಮೆ ಮತ್ತು ನಿಷ್ಠೆ ನಮ್ಮಲ್ಲಿ ಇರಬೇಕು. ಆಗ ಅಧಿಕಾರ ಅಥವಾ ಉನ್ನತ ಸ್ಥಾನಮಾನ ನಮಗೆ ದೊರಕುತ್ತವೆ ಎಂಬುದಕ್ಕೆ ಇವರ ಆಯ್ಕೆ ನಿದರ್ಶನ ಎಂದರು. ಸತ್ಕಾರ ಸ್ವೀಕರಿಸಿ ಮಾತನಾಡಿದ ಹಿರಾ ಶುಗರ್ ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ, ನಮ್ಮ ಮನೆತನ ಮೊದಲಿನಿಂದ ಕತ್ತಿ ಸಹೋದರರ ಪರವಾಗಿದೆ. ನಾನು ಈ ಮೊದಲು ಪುರಸಭೆ ಸದಸ್ಯ, ಉಪಾಧ್ಯಕ್ಷ ಹಾಗೂ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ, ಅಧ್ಯಕ್ಷನಾಗಿ ಆಯ್ಕೆಯಾಗುವಲ್ಲಿ ಕತ್ತಿ ಸಹೋದರರ ಕೊಡುಗೆ ಹೆಚ್ಚಾಗಿದೆ ಎಂದರು.

ಕತ್ತಿ ಸಹೋದರರು ತಮ್ಮನ್ನು ಬೆಂಬಲಿಸಿದವರನ್ನು ಹಾಗೂ ಹಿಂಬಾಲಕರನ್ನು ಎಂದಿಗೂ ಕೈ ಬಿಡುವುದಿಲ್ಲ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಸಚಿವ ಉಮೇಶ ಕತ್ತಿ ಅವರು ಜಿಲ್ಲೆಯ
ಬಹುಪಾಲು ಶಾಸಕರ ಆಯ್ಕೆಗೆ ಕಾರಣೀಕರ್ತರಾಗಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು.

ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಕೆ.ಕೆ.ಬೆಣಚಿನಮರಡಿ, ಸ್ಥಾನಿಕ ಅಭಿಯಂತ ನೇಮಿನಾಥ ಖೇಮಲಾಪುರೆ, ಮ್ಯಾನೇಜರ್ ದುರದುಂಡಿ ನಾಯಿಕ, ಬಿ.ಎಸ್.ಘಸ್ತಿ, ಆರ್.ಸಿ.ವಂಟಮೂರಿ ಎನ್.ಎಸ್.ಸರದೇಸಾಯಿ, ಅಭಿಯಂತ ಉದಯಕುಮಾರ ಮಗದುಮ್ಮ, ಭರತ್ ಮಲಗೌಡನವರ, ನಿವೃತ್ತ ಸಿಬ್ಬಂದಿ ಆರ್.ಎಂ.ಪಾಟೀಲ, ದೊಡಗಣ್ಣವರ, ಕೆಂಪಣ್ಣ ನೇರ್ಲಿ, ಪಿಕೆಪಿಎಸ್ ಅಧ್ಯಕ್ಷ ಅಣ್ಣಯ್ಯ ಸಂಬಾಳ ಮತ್ತಿತರರಿದ್ದರು.

ಸಚಿವ ಉಮೇಶ ಕತ್ತಿ ಅವರ ಹಿರಿತನ ಗುರುತಿಸಿ ಬಿಜೆಪಿ ಸರ್ಕಾರದ ಮೊದಲ ಅವಧಿಯಲ್ಲೇ ಸಚಿವರಾಗುತ್ತಾರೆಂದು ಹಲವರ ನಿರೀಕ್ಷೆ ಇತ್ತು. ಆದರೆ, ಎರಡನೇ ಅವಧಿಯವರೆಗೆ ಅವರು ತಾಳ್ಮೆ ವಹಿಸಿದ್ದರಿಂದ ಅವರಿಗೆ ಅರಣ್ಯ, ಆಹಾರ ಇಲಾಖೆ ಸಚಿವ ಸ್ಥಾನ ದೊರಕಿದೆ.| ಪೃಥ್ವಿ ಕತ್ತಿ ಉದ್ಯಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net