ಅಳಿದ ಮೇಲೆಯೂ ಉಳಿದ ಗುರುವರ್ಯ ಪ್ರೊ.ಕೆ.ಎಸ್. ನಾರಾಯಣಾಚಾರ್ಯ

Prof KSN
Published on

| ಡಾ.ರಾಜೇಶ್ವರಿ ಮಹೇಶ್ವರಯ್ಯ

ಅಳಿದ ಮೇಲೆಯೂ ಬದುಕುವುದು ಎಂದರೆ ಸಾಹಿತ್ಯದ ಮೂಲಕ, ಹಾಗೆ ಬರೆದು ಅಮರರಾಗುವುದು. ಇಲ್ಲದಿದ್ದರೆ ಬೇರೆಯವರು ಬರೆಯುವ ಹಾಗೆ ಬದುಕುವುದು. ಹಾಗೆ ಬರೆಯುವುದು ಅಥವಾ ಬದುಕುವುದು ಕಷ್ಟಸಾಧ್ಯವಾದರೂ ಅನೇಕ ಸಾಧಕರು ಹಾಗೆ ಬರೆದಿದ್ದಾರೆ, ಹಾಗೆ ಬದುಕಿದ್ದಾರೆ. ಹಾಗೆ ಬದುಕಿಯೇ ಪರರ ಬಾಳಿಗೆ ಚೈತನ್ಯ ನೀಡುತ್ತಲಿದ್ದಾರೆ. ಪ್ರೊ. ಕೆ. ಎಸ್. ನಾರಾಯಣಾಚಾರ್ಯ ಅವರು ಇಂಥ ಅದ್ವಿತೀಯ ಬದುಕನ್ನು ಬದುಕಿದ ಪುಣ್ಯಚೇತನರು.

ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕ ರಾಗಿದ್ದರೂ ದೇಸೀಯ ನೆಲೆಗಟ್ಟಿನ ಮೇಲೆ ಬದುಕನ್ನು ಕಟ್ಟಿಕೊಂಡು ಸಮನ್ವಯತೆಯನ್ನು ಪ್ರತಿನಿಧಿಸುವಂತೆ ಅವರು ಬಾಳಿದರು. ಇಂಗ್ಲಿಷ್ ಪ್ರಾಧ್ಯಾಪಕರಾಗಿ ಅವರಿದ್ದ ರೀತಿಯನ್ನು ಈಗಿನವರು ಕಲ್ಪಿಸಲೂ ಸಾಧ್ಯವಾಗದು. ನೀಟಾಗಿ ಇಸ್ತ್ರಿ ಮಾಡಿದ ಕಾಲರ್ ಕೋಟು-ಪ್ಯಾಂಟು, ತಲೆಯಮೇಲೆ ಕಪ್ಪನೆಯ ಟೋಪಿ- ಇವು ಪೂರ್ವ-ಪಶ್ಚಿಮ ಎರಡನ್ನೂ ಪ್ರತಿನಿಧಿಸುತ್ತಿದ್ದವು. ನೀಟಾದ ದಿರಿಸಿನ ಜೊತೆಯಲ್ಲಿ ಶಿಸ್ತುಬದ್ಧವಾದ ನಡವಳಿಕೆ, ಹಿತಮಿತವಾದ ಮಾತುಕತೆ ಎಲ್ಲವೂ ಆದರಪೂರಿತ ಗೌರವ ಭಾವನೆಯನ್ನು ಅವರ ಸಂಪರ್ಕದಲ್ಲಿದ್ದವರಲ್ಲಿ ಮೂಡಿಸುತ್ತಿತ್ತು. ಅವರ ವರ್ಗಬೋಧನೆಯನ್ನು ಯಾವ ವಿದ್ಯಾರ್ಥಿಯೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಪೂರ್ವದ ತತ್ತ್ವಸಿದ್ಧಾಂತಗಳು ಹಾಗೂ ಪಶ್ಚಿಮದ ಶಿಸ್ತು, ಕಾಲಬದ್ಧತೆ ಅವರ ವ್ಯಕ್ತಿತ್ವದಲ್ಲಿ ಮೇಳೈಸಿದ್ದವು. ನಾನವರ ನೇರ ಶಿಷ್ಯೆಯಾಗಿರದಿದ್ದರೂ ಅನೇಕ ವಿದ್ಯಾರ್ಥಿಗಳಂತೆ ಅವರ ವರ್ಗಗಳಿಗೆ ಹಾಜರಾಗುತ್ತಿದ್ದುದುಂಟು. ಅವರ ಚಿಕಿತ್ಸಿಕ ಬುದ್ಧಿಯ ಬೋಧನೆಯನ್ನು ಆಸ್ವಾದಿಸುತ್ತಿದ್ದುದುಂಟು. ಹೀಗೆ ಗುರುಗಳಾಗಿ ಅವರ ಪ್ರಭಾವ ನಮ್ಮಂಥ ಶಿಷ್ಯರ ಮೇಲೆ ಅಪಾರ. ನಿವೃತ್ತಿಯ ನಂತರ ಅವರ ಬದುಕು ಸಂಪೂರ್ಣವಾಗಿ ಅಧ್ಯಾತ್ಮದತ್ತ ಹೊರಳಿತು. ಕೆಲ ವರ್ಷ ಧಾರವಾಡದಲ್ಲೇ ವಾಸವಾಗಿದ್ದು, ನಂತರ ಮೂಲ ಊರಾದ ಮೈಸೂರಿನಲ್ಲಿ, ಬಳಿಕ ಬೆಂಗಳೂರಿನಲ್ಲಿ ನೆಲೆಸಿದರು. ತುಂಬು ತೋಳಿನ ಬಿಳಿಯ ಶರ್ಟ್, ಮೇಲೊಂದು ಶಲ್ಯ, ಧೋತಿ, ಹಣೆಯ ಮೇಲೆ ಶ್ರೀವೈಷ್ಣವನಾಮ, ನಾಲಿಗೆ ಮೇಲೆ ಸರಸ್ವತಿ ಕುಣಿಯುತ್ತಿರುವಳೇನೋ ಎಂಬಂತೆ ಅವರ ಪ್ರವಚನ ಮೊಳಗುತ್ತಿದ್ದರೆ ಜನ ಅವರ ಪ್ರವಚನಕ್ಕಾಗಿ ಪ್ರೀತಿಯಿಂದ ಧಾವಿಸಿ ಬರುತ್ತಿದ್ದರು. ಹುಬ್ಬಳ್ಳಿ ಇರಲಿ, ಮೈಸೂರು, ಧಾರವಾಡವೇ ಇರಲಿ ಈ ದೃಶ್ಯ ಸರ್ವೇಸಾಮಾನ್ಯವಾಗಿತ್ತು.

ನಾನು ಕರ್ನಾಟಕ ಕಾಲೇಜಿನ ಪ್ರಾಚಾರ್ಯು ಆಗಿದ್ದ ಸಂದರ್ಭದಲ್ಲಿ ಕಾಲೇಜಿಗೆ ಅವರನ್ನು ಆಮಂತ್ರಿಸಿದ್ದೆ. ಶತಮಾನೋತ್ಸವ ಸಂದರ್ಭದಲ್ಲಿ ಬರಲಾಗದಿದ್ದರೂ ಆ ವರ್ಷಾಂತ್ಯದಲ್ಲಿ ಪ್ರೀತಿಯಿಂದ ಬಂದು ತಾವಿಲ್ಲಿ ಕಳೆದ, ಬೆಳೆದ ದಿನಗಳನ್ನು ಮನಃ ಪೂರ್ವಕವಾಗಿ ಸ್ಮರಿಸಿಕೊಂಡರಲ್ಲದೆ ರಾಷ್ಟ್ರೊತ್ಥಾನದ ಕುರಿತಂತೆ ಅತ್ಯಪೂರ್ವವಾದ ಭಾಷಣ ಮಾಡಿದರು (15.10.2017). ಆ ಸಮಾರಂಭ ಧಾರವಾಡದಲ್ಲಿನ ಅವರ ಕೊನೆಯ ಭಾಷಣ ಆದೀತೆಂದು, ಧಾರಾನಗರಿಯ ಬಾಂಧವ್ಯದ ಕೊಂಡಿ ಕಳಚಿತೆಂದು ನಾವ್ಯಾರೂ ಅಂದುಕೊಂಡಿರಲಿಲ್ಲ. ಲಕ್ಷಿ್ಮೕ- ನಾರಾಯಣರಂತೆ ಸತಿಪತಿಗಳು ಜೊತೆಗೂಡಿ ಬಂದಿದ್ದನ್ನು, ಆನಂದಮಯ ವಾತಾವರಣ ಸೃಷ್ಟಿಸಿದ್ದನ್ನು ಮರೆಯಲು ಸಾಧ್ಯವೆ? ಅವರ ದೇಹ ಅಳಿದರೂ ನೆನಪಾಗಿ ಸಹಸ್ರಾರು ಜನರ ಮನದಲ್ಲಿ ಉಳಿದಿದ್ದಾರೆ. ಅಂಥ ಅನುಪಮ ಗುರುಗಳಿಗೆ ನಮ್ಮ ನಮನಗಳು.

(ಲೇಖಕರು ನಿವೃತ್ತ ಪ್ರಾಚಾರ್ಯರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net