ಅಲೆಮಾರಿಗಳಿಗೆ ಸಿಗದ ವಸತಿ ಸೌಲಭ್ಯ

5 Aurad 1
 ಔರಾದ್‌ನಲ್ಲಿ ಬುಧವಾರ ಅಲೆಮಾರಿ ಕಾಲನಿಗೆ ರಾಜ್ಯಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು. ಅಧಿಕಾರಿಗಳಾದ ಮಲ್ಲಶೆಟ್ಟಿ ಚಿದ್ರೆ, ಮಾಣಿಕರಾವ್ ಪಾಟೀಲ್, ಅನೀಲಕುಮಾರ ವಾಲ್ದೊಡ್ಡಿ, ರವೀಂದ್ರ ಮೇತ್ರೆ, ಸಿಪಿಐ ರಘುವೀರಸಿಂಗ್ ಠಾಕೂರ್, ಸಿಡಿಪಿಒ ಇಮಾಲಪ್ಪ ಡಿಕೆ, ಡಾ.ಗಾಯತ್ರಿ, ಶಿವಕುಮಾರ ಘಾಟೆ ಇದ್ದರು.
Published on

ಔರಾದ್: ಅಲೆಮಾರಿ ಜನಾಂಗದವರಿಗೆ ಒಂಬತ್ತು ವರ್ಷಗಳಿಂದ ವಸತಿ ಸೌಲಭ್ಯ(ನಿವೇಶನ) ಕಲ್ಪಿಸದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸಿಡಿಮಿಡಿಗೊಂಡರು.

ಪಟ್ಟಣದ ಅಲೆಮಾರಿ ಸಮುದಾಯದ ಕಾಲನಿಗೆ ಬುಧವಾರ ಭೇಟಿ ನೀಡಿ ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದ ಅವರು, ಅಧಿಕಾರಿಗಳಿರುವುದು ಏತಕ್ಕೆ? ನಿಮ್ಮನ್ನು ಸರ್ಕಾರ ಏಕೆ ನೇಮಿಸಿದೆ? ನಾನು ಬಂದರೂ ನೀವು ತಡವಾಗಿ ಬರುತ್ತೀರಿ ಅಂದ್ಮೇಲೆ ಬಡವರ ಸಮಸ್ಯೆಗೆ ಹೇಗೆ ಸ್ಪಂದಿಸುತ್ತೀರಿ ಎಂಬುದು ತಿಳಿಯುತ್ತದೆ ಎಂದು ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರನ್ನು ದೂರವಾಣಿಯಲ್ಲಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ಅಲೆಮಾರಿಗಳಿಗೆ ನ್ಯಾಯಾಲಯ ವಸತಿ ನೀಡಿ ಎಂದು ಆದೇಶಿಸಿ ಎಂಟು ವರ್ಷವಾದರೂ ಇದುವರೆಗೆ ಏಕೆ ಕ್ರಮ ಕೈಗೊಂಡಿಲ್ಲ? ಸಮಸ್ಯೆ ಪರಿಹರಿಸಲು ನಾನು ಇಲ್ಲಿಗೆ ಬರುವ ಪ್ರಸಂಗ ಬಂದಿದೆ. ಅಂದರೆ ಅಧಿಕಾರಿಗಳು ಯಾಕಿರಬೇಕು? ಇನ್ಮುಂದಾದರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿ ತಡವಾಗಿ ಬಂದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅನೀಲಕುಮಾರ ವಾಲ್ದೊಡ್ಡಿ ಅವರನ್ನು ತರಾಟೆ ತೆಗೆದುಕೊಂಡರು.

ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಚರ್ಚಿಸಿ ಅಲ್ಲಿನ ನೈಜ ಚಿತ್ರಣದ ಬಗ್ಗೆ ಮಾಹಿತಿ ಪಡೆದರು. ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಎಲ್ಲ ವಾರ್ಡ್ಗಳಲ್ಲಿ ಸುತ್ತಾಡಿ ವ್ಯವಸ್ಥೆ ಪರಿಶೀಲಿಸಿದರು. ಸಿಬ್ಬಂದಿ ಮತ್ತು ವೈದ್ಯರು ರೋಗಿಗಳ ಜತೆ ಉತ್ತಮವಾಗಿ ವರ್ತಿಸಬೇಕು. ನೀವಿರುವುದೇ ಬಡವರ ಸೇವೆ ಮಾಡಲು ಎಂಬುದನ್ನು ತಿಳಿಯಿರಿ ಎಂದರು.

ಮಹಿಳಾ ವಸತಿನಿಲಯಕ್ಕೆ ಭೇಟಿ ನೀಡಿ ಮಕ್ಕಳನ್ನು ಮಾತನಾಡಿಸಿದಾಗ, ವಾರ್ಡನ್ ಮೂಲಸೌಕರ್ಯ ಕಲ್ಪಿಸಿಲ್ಲ. ಪ್ರತಿ ತಿಂಗಳು ಕಿಟ್ ಸಹ ಸರಿಯಾದ ಸಮಯಕ್ಕೆ ನೀಡುತ್ತಿಲ್ಲ, ಶೌಚಗೃಹಗಳ ಸ್ವಚ್ಛತೆ ಇಲ್ಲ. ಸಕಾಲಕ್ಕೆ ಊಟ ನೀಡುವುದಿಲ್ಲ ಎಂದು ಗೋಳು ತೋಡಿಕೊಂಡರು. ಸ್ಥಳದಲ್ಲಿದ್ದ ಅಧಿಕಾರಿ ಮೀನಾಕ್ಷಿ ಅವರನ್ನು ತರಾಟೆಗೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಇಂಥ ದೂರು ಬರದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿದರು.

ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ತಾಪಂ ಇಒ ಮಾಣಿಕರಾವ್ ಪಾಟೀಲ್, ಬಿಸಿಎಂ ಇಲಾಖೆ ರವೀಂದ್ರ ಮೇತ್ರೆ, ಸಿಪಿಐ ರಘುವೀರಸಿಂಗ್ ಠಾಕೂರ್, ಸಿಡಿಪಿಒ ಇಮಾಲಪ್ಪ ಡಿ.ಕೆ., ಟಿಎಚ್‌ಒ ಡಾ.ಗಾಯತ್ರಿ, ತಾಪಂ ಎಡಿ ಶಿವಕುಮಾರ ಘಾಟೆ, ಡಾ.ಶಂಕರರಾವ ದೇಶಮುಖ, ಪಿಎಸ್‌ಐ ವಾಸೀಮ್ ಪಟೇಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net