ಅಲೆಮಾರಿ ಕೊರಚ ಸಮುದಾಯಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಿ

Published on

ತಿ.ನರಸೀಪುರ: ಪಟ್ಟಣದ ಹೊರ ವಲಯದಲ್ಲಿರುವ ಶಿವಪಾರ್ವತಿ ನಗರದಲ್ಲಿ ವಾಸವಿರುವ ಪರಿಶಿಷ್ಟ ಜಾತಿಯ ಅಲೆಮಾರಿ ಕೊರಚ ಸಮುದಾಯದ ಜನರಿಗೆ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವಂತೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಪುರಸಭೆ ಮುಖ್ಯಾಧಿಕಾರಿ ಅವರನ್ನು ಆಗ್ರಹಿಸಿದ್ದಾರೆ.

ಪುರಸಭೆ ಮತದಾರರಾಗಿರುವ ಪರಿಶಿಷ್ಟ ಜಾತಿಯ ಅಲೆಮಾರಿ, ಕೊರಚ ಸಮುದಾಯದ ಸುಮಾರು 40 ಕುಟುಂಬಗಳು ಮೂವತ್ತು ವರ್ಷಗಳಿಂದ ಅಲ್ಲಲ್ಲಿ ಖಾಸಗಿ ಜಮೀನುಗಳಲ್ಲಿ ನೆಲಬಾಡಿಗೆ ಕಟ್ಟಿಕೊಂಡು ವಾಸಿಸುತ್ತಿದ್ದರು. ದಸಂಸ ಹೋರಾಟದ ಫಲವಾಗಿ ತಾಲೂಕು ಆಡಳಿತ ಪಟ್ಟಣದ ಬಂಗಾರಪ್ಪ ಬಡಾವಣೆಯ ಬಳಿ ಇರುವ ಆಲಗೂಡು ಸರ್ವೇ ನಂ.462ರಲ್ಲಿ ಜಾಗವನ್ನು ಗುರುತಿಸಿ ಆ ಸ್ಥಳದಲ್ಲಿ ವಾಸಿಸುವಂತೆ ಸೂಚಿಸಿರುತ್ತದೆ. ಆದಾಗ್ಯೂ ಪುರಸಭೆ ಇದುವರೆವಿಗೂ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲ ಎಂದು ದೂರಿದ್ದಾರೆ.

ಪುರಸಭಾ ವ್ಯಾಪ್ತಿಯ ಪ್ರಸ್ತುತ ಹೊಸ ಶಿವಪಾರ್ವತಿ ನಗರದಲ್ಲಿ ಕೊರಚರು ತಾತ್ಕಾಲಿಕ ಜೋಪಡಿಗಳನ್ನು ಕಟ್ಟಿಕೊಂಡು ವಾಸಿಸುತ್ತಿರುತ್ತಾರೆ. ಇಲ್ಲಿನ ಜನರಿಗೆ ಕಳೆದ ಒಂದು ವರ್ಷಗಳಿಂದ ಕುಡಿಯುವ ನೀರು, ಬೀದಿ ದೀಪ, ಶೌಚಗೃಹ, ವಿದ್ಯುತ್ ದೀಪ, ರಸ್ತೆ ಹಾಗೂ ಚರಂಡಿ ಇತ್ಯಾದಿ ಮೂಲ ಸೌಲಭ್ಯಗಳು ಮರೀಚಿಕೆಯಾಗಿವೆ. ಶಾಶ್ವತವಾದ ಸೌಲಭ್ಯ ಕಲ್ಪಿಸಿ ಕೊಡುವ ತನಕ ತಾತ್ಕಾಲಿಕವಾಗಿ ಕುಡಿಯುವ ನೀರು, ಮತ್ತು ಬೆಳಕು ನೀಡಬೇಕಾದ ಪುರಸಭಾ ಆಡಳಿತ ಈ ಜನರಿಗೂ, ನಮಗೂ ಯಾವುದೇ ಸಂಬಂಧ ಇಲ್ಲದಂತೆ ತಾತ್ಸಾರ ಮನೋಭಾವದಿಂದ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಗಮನಕ್ಕೆ ತಂದರೆ ಕಿವಿ ಇದ್ದು ಕಿವುಡರಂತೆ ವರ್ತಿಸುತ್ತಿದ್ದಾರೆ. ಇದೇ ಸ್ಥಳದಲ್ಲಿ ಈ ಜನರಿಗೆ ಶಾಶ್ವತ ನೆಲೆ ಮತ್ತು ಸೂರು ಕಲ್ಪಿಸುವ ನೀಡಿದ್ದ ಭರವಸೆ ವಂಚಿಸುವ ತಂತ್ರದ ಭಾಗವಾಗಿ ಗೋಚರಿಸುತ್ತಿದೆ. ಹಾಗಾಗಿ ಇಲ್ಲಿನ ಜನರಿಗೆ ಶಾಶ್ವತ ನೆಲೆ ಮತ್ತು ಸೂರು ಒದಗಿಸಬೇಕೆಂದು ಕೇಳಿಕೊಳ್ಳುತೇವೆ. ತಪ್ಪಿದ್ದಲ್ಲಿ ಮತ್ತೆ ಪುರಸಭಾ ಕಾರ್ಯಾಲಯದ ಮುಂಭಾಗ ಪ್ರತಿಭಟನೆ ದಲಿತ ಸಂಘರ್ಷ ಸಮಿತಿಗೆ ಅನಿವಾರ್ಯವಾಗಲಿದೆ ಎಂದು ಆಲಗೂಡು ಶಿವಕುಮಾರ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net