ಅಲೆಮಾರಿ ಕುಟುಂಬಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಸೂಚನೆ

14
Published on

ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಕುಟುಂಬಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ತಿಳಿಸಿದರು.

ಡಿ.2ರಿಂದ 4ರವರೆಗೆ ಜಿಲ್ಲೆಯ ಎಲ್ಲ ತಾಲೂಕು ಪ್ರವಾಸ ಮಾಡಿದ್ದು, ಈ ಭಾಗದಲ್ಲಿ ವಾಸ ಮಾಡುತ್ತಿರುವ ಅಲೆಮಾರಿ ಸಮುದಾಯದವರ ಸಮಸ್ಯೆಗಳನ್ನು ಆಲಿಸಲಾಗಿದೆ. ಶೀಘ್ರವೇ ಸಮಸ್ಯೆಗಳನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ 300ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಕುಟುಂಬಗಳು ವಾಸಿಸುತ್ತಿದ್ದು, ಇಂದಿಗೂ ಮೂಲ ಸೌಕರ್ಯದಿಂದ ವಂಚಿತವಾಗಿವೆ. ಈ ಸಂಬಂಧ ಮೂಲ ಸೌಕರ್ಯ ಕಲ್ಪಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿರುವುದಲ್ಲದೇ, ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಲಿಗ್ರಾಮ ತಾಲೂಕಿನ ರಾಮಪುರ ಬಳಿ 70 ವರ್ಷದಿಂದ 80 ಹಂದಿಜೋಗಿ ಕುಟುಂಬಗಳ ವಾಸ ಮಾಡುತ್ತಿದ್ದು, ಇವರಿಗೂ ಸ್ವಂತ ನೆಲೆ ಇಲ್ಲ. ಇವರಿಗೆ ಸರ್ಕಾರದ ಜಾಗ ಗುರುತಿಸಿ, ಮನೆ ನಿರ್ಮಾಣ ಮಾಡಿಕೊಡಲು ಸೂಚನೆ ನೀಡಲಾಗಿದೆ. ಹುಣಸೂರು ತಾಲೂಕಿನ ಅಂಬೇಡ್ಕರ್ ಕಾಲನಿಯಲ್ಲಿ 33 ದೋಂಬರ ಕುಟುಂಬ ಹಾಗೂ 30 ಜೇನು ಕುರುಬ ಕುಟುಂಬಗಳು ಇವೆ. ಆದರೆ, ಇವರ‌್ಯಾರಿಗೂ ಆಧಾರ್, ಮತದಾರರ ಚೀಟಿ ಸೇರಿದಂತೆ ಗುರುತಿನ ಚೀಟಿಗಳಿಲ್ಲ. ಪರಿಣಾಮ ಪಡಿತರ ಸೌಲಭ್ಯದಿಂದ ವಂಚಿತರಾಗಿರುವುದು ಕಂಡು ಬಂದಿದೆ. ಎಲ್ಲರಿಗೂ ಗುರುತಿನ ಚೀಟಿ ನೀಡಲು ಶಿಬಿರ ಆಯೋಜಿಸಲು ಹೇಳಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net