

ಮುಳಬಾಗಿಲು: ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ತಾಲೂಕು ಆಡಳಿತದಿಂದ ಜೂ 27ರ ಸೋಮವಾರ ತಾಲೂಕು ಕಚೇರಿಯಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲು ಶಾಸಕ ಎಚ್.ನಾಗೇಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಬಳಿಕ ಮಾತನಾಡಿದ ಶಾಸಕ ನಾಗೇಶ್, ನಾಡಪ್ರಭು ಕೆಂಪೇಗೌಡರು ದೂರದೃಷ್ಠಿಯಿಂದ ಬೆಂಗಳೂರು ನಿರ್ಮಾಣ ಮಾಡಿದರು. ಇಂದು ಎಲ್ಲ ಸಮುದಾಯದವರು ಜೀವನ ನಡೆಸುವ ದೊಡ್ಡ ಮಹಾನಗರವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಂಡಿರುವ ಬೆಂಗಳೂರಿಗೆ ಭದ್ರಬುನಾದಿ ಹಾಕಿಕೊಟ್ಟ ಕೆಂಪೇಗೌಡರ ಜಯಂತಿಯನ್ನು ತಾಲೂಕಿನ ಪ್ರತಿಯೊಂದು ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ಜೂ 27ರಂದು ಕಡ್ಡಾಯವಾಗಿ ಆಚರಣೆ ಮಾಡಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ಆರ್.ಶೋಭಿತಾ ಮಾತನಾಡಿ, ಸರ್ಕಾರದಿಂದ ಪ್ರತಿ ಜಯಂತಿಗೂ 25 ಸಾವಿರ ರೂ. ಅನುದಾನ ಬರುತ್ತದೆ. ಅದರಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲು ಸಲಹೆ ಸೂಚನೆಗಳನ್ನು ನೀಡಬೇಕು. ವಿಶೇಷವಾಗಿ ಒಕ್ಕಲಿಗರ ಸಮುದಾಯದ ಮುಖಂಡರು ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಮುಂದಾದರೆ ತಾಲೂಕು ಆಡಳಿತ ಸಹಕರಿಸಲಿದೆ ಎಂದು ವಿವರಿಸಿದರು.
ತಾಲೂಕು ಪಿಡಬ್ಲ್ಯುಡಿ ಗುತ್ತಿಗೆದಾರರ ಸಂದ ಅಧ್ಯಕ್ಷ ಜಿ.ವಿ.ವರದಪ್ಪ ಮಾತನಾಡಿ, ನಾಡಪ್ರಭು ಜಯಂತಿ ಅರ್ಥಪೂರ್ಣವಾಗಿ ಆಚರಣೆ ಮಾಡುವಂತಾಗಲಿ ಎಂದರು.
ಹಿರಿಯ ರೈತ ಹೋರಾಟಗಾರ ಹೆಬ್ಬಣಿ ಎಂ.ಗೋಪಾಲ್ ಮಾತನಾಡಿ, ನಾಡಪ್ರಭು ಜಯಂತಿಯನ್ನು ಎಲ್ಲ ಜಯಂತಿಗಳಂತೆ ತಾಲೂಕು ಆಡಳಿತ ವಿಜೃಂಭಣೆಯಿಂದ ಆಚರಣೆ ಮಾಡಬೇಕು. ಪ್ರತಿ ಗ್ರಾಮ ಪಂಚಾಯಿತಿಯಿಂದ ಒಂದೊಂದು ಪಲ್ಲಕ್ಕಿಯನ್ನು ಪೂಜಿಸಿಕೊಂಡು ಬಂದು ತಾಲೂಕು ಆಡಳಿತ ಏರ್ಪಡಿಸುವ ಸಭೆಯಲ್ಲಿ ಪಾಲ್ಗೊಂಡರೆ ನಾಡಪ್ರಭು ಆದರ್ಶಗಳು ಗ್ರಾಮಗಳಿಗೆ ತಲುಪಲು ಸಾಧ್ಯವಾಗುತ್ತದೆ ಎಂದರು.
ತಾಲೂಕು ಒಕ್ಕಲಿಗರ ಸಂದ ಅಧ್ಯಕ್ಷ ಅಲಂಗೂರು ಶಿವಣ್ಣ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಆರ್.ರಾಜೇಂದ್ರಗೌಡ ಮಾತನಾಡಿ, ಒಕ್ಕಲಿಗ ಸಮುದಾಯ ದೊಡ್ಡ ಸಮುದಾಯವಾಗಿದ್ದು ಒಂದು ವಾರದಲ್ಲಿ ಎಲ್ಲ ಗ್ರಾಮಗಳಿಗೂ ಮಾಹಿತಿ ನೀಡಲು ಸಾಧ್ಯವಿಲ್ಲ. ಸಮಯ ಅಭಾವ ಇರುವುದರಿಂದ ಎಲ್ಲ ಶಾಲೆ&ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ನಾಡಪ್ರಭು ಜಯಂತಿಯನ್ನು ನಿಷ್ಠೆಯಿಂದ ಮಾಡುವಂತಾ ವ್ಯವಸ್ಥೆಯನ್ನು ತಾಲೂಕು ಆಡಳಿತ ಮಾಡಬೇಕು ಎಂದು ಒತ್ತಾಯಿಸಿದರು.
ಒಕ್ಕಲಿಗರ ಸಂದ ಪದಾದಿಕಾರಿಗಳಾದ ಎಸ್.ಎನ್.ರುಪತಿಗೌಡ, ಎನ್.ವೆಂಕಟರವಣಪ್ಪ, ಬಿ.ನಾಗರಾಜ್, ಸಿ.ಆರ್.ಶಿವರಾಜ್, ಕೆ.ಎಂ.ರವಿ, ಮೊತಕಪಲ್ಲಿ ಶಿವಪ್ರಕಾಶ್, ಗುಜ್ಜನಹಳ್ಳಿ ಮಂಜುನಾಥ್, ಕೊಲದೇವಿ ಉಮಾಶಂಕರ್, ಬೈರೇಗೌಡ, ಪಿ.ಎಸ್.ವರದರಾಜಪ್ಪ, ಬಿ.ಎಂ.ವೆಂಕಟರಮಣಗೌಡ, ಎಂ.ಎಸ್.ವೆಂಕಟಾಚಲಪತಿಗೌಡ, ಆರ್.ಪೆದ್ದಪ್ಪಯ್ಯ, ಬಾಲಕೃಷ್ಣ, ರಮೇಶ್ ಮತ್ತಿತರರಿದ್ದರು.