ಅರ್ಜಿ ಶುಲ್ಕದ ಜತೆಗೆ ಪರಿಶೀಲನಾ ಶುಲ್ಕವನ್ನು ಪಾವತಿಸಬೇಕು

ADMISSION_STUDENTS_UNIVERSITY
Published on
  • ವಿಜಯವಾಣಿ ಸುದ್ದಿಜಾಲ ಬೆಂಗಳೂರು
    ಉದ್ಯೋಗ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇನ್ನು ಮುಂದೆ ಅರ್ಜಿ ಶುಲ್ಕದ ಜತೆಗೆ ಅಂಕಪಟ್ಟಿ ಪರಿಶೀಲನಾ ಶುಲ್ಕವನ್ನೂ ಪಾವತಿಸಬೇಕು.
    ನಕಲಿ ಅಂಕಪಟ್ಟಿಗಳ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದುನ್ನು ತಡೆಯಲು ಆನ್‌ಲೈನ್ ಮೂಲಕ ಅಂಕಪಟ್ಟಿಗಳನ್ನು ವಿತರಿಸಲು ಮತ್ತು ದೃಢೀಕರಿಸಲು ತಗಲುವ ವೆಚ್ಚವನ್ನು ವಿದ್ಯಾರ್ಥಿಗಳಿಂದಲೇ ಸಂಗ್ರಹಿಸುವಂತೆ ಸರ್ಕಾರ ಹೊಸ ನಿಯಮ ಮಾಡಿದೆ.
    ಇಷ್ಟು ವರ್ಷಗಳ ಕಾಲ ನೇಮಕಾತಿ ಪ್ರಾಧಿಕಾರವೇ ಅಂಕಪಟ್ಟಿಗಳ ಪರಿಶೀಲನಾ ಶುಲ್ಕವನ್ನು ಪಾವತಿಸುತ್ತಿತ್ತು.
    ಇದೀಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣ ಪತ್ರ ಹಾಗೂ ಇನ್ನಿತರೆ ದಾಖಲಾತಿಗಳ ಜತೆಗೆ ಅಭ್ಯರ್ಥಿಗಳು ಸಲ್ಲಿಸುವ ಅಂಕಪಟ್ಟಿ, ಶೈಕ್ಷಣಿಕ ಪ್ರಮಾಣ ಪತ್ರಗಳ ನೈಜ್ಯತೆಯನ್ನು ಅವುಗಳನ್ನು ವಿತರಿಸಿದ ವಿವಿ, ಪರೀಕ್ಷಾ ಮಂಡಳಿಗಳೊಂದಿಗೆ ಪರಿಶೀಲನೆ ನಡೆಸಬೇಕು. ಇದು ಖಾತರಿಯಾದ ಬಳಿಕವೇ ನೇಮಕಾತಿ ಆದೇಶ ನೀಡಲಾಗುತ್ತದೆ.
    ಇದಕ್ಕೆ ತಗಲು ವೆಚ್ಚವನ್ನು ಅಭ್ಯರ್ಥಿಗಳಿಂದಲೇ ಪಡೆಯಬೇಕು. ಅದಕ್ಕೆ ತಗಲುವ ವೆಚ್ಚವನ್ನು ಲೆಕ್ಕಹಾಕಿ ನೇಮಕಾತಿ ಅಧಿಸೂಚನೆ ಹೊರಡಿಸುವ ಅರ್ಜಿ ಶುಲ್ಕದೊಂದಿಗೆ ಸೇರಿಸಿ ಜಾಹಿರಾತು ನೀಡುವಂತೆ ತಿಳಿಸಿದೆ.
    ನಿರುದ್ಯೋಗಿಗಳು ಅರ್ಜಿ ಶುಲ್ಕ ಪಾವತಿಸುವುದೇ ಕಷ್ಟ. ಅಲ್ಲದೆ, ಹುದ್ದೆಗೆ ಆಯ್ಕೆಯಾಗುತ್ತೇವೆ ಎಂಬ ಖಾತರಿ ಇಲ್ಲದಿದ್ದರೂ ಅನಿವಾರ್ಯವಾಗಿ ಶುಲ್ಕ ಪಾವತಿಸುವುದು ವಿದ್ಯಾರ್ಥಿಗಳಿಗೆ ಅನವಶ್ಯಕವಾಗಿ ಆರ್ಥಿಕ ಹೊರೆಯಾಗಲಿದೆ. ಸಾಮಾನ್ಯವಾಗಿ ಕೆಪಿಎಸ್‌ಸಿ ನಡೆಸುವ ಪರೀಕ್ಷೆಗೆ ಸಾಮಾನ್ಯ ವರ್ಗದವರಿಗೆ 300 ರೂ. ಅರ್ಜಿ ಶುಲ್ಕ ನಿಗದಿ ಪಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸುವ ನೇಮಕಾತಿಗೆ ಸಾಮಾನ್ಯ ವರ್ಗದವರಿಗೆ 500 ರೂ. ಕನಿಷ್ಠ ಅರ್ಜಿ ಶುಲ್ಕ ಇದೆ.
    ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಈ ಪರಿಶೀಲನೆ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡಿದೆ. ಪ್ರತಿ ಪರಿಶೀಲನೆಗೆ 200 ರೂ.ನಿಂದ 500ರೂ.ಗಳವರೆಗೆ ಶುಲ್ಕ ನಿಗದಿ ಪಡಿಸಿದೆ. ಬೆಂಗಳೂರು ವಿವಿ 700 ರೂ. ಪಡೆದುಕೊಳ್ಳುತ್ತದೆ. ಈ ಶುಲ್ಕವನ್ನು ನೇಮಕಾತಿ ಪ್ರಾಧಿಕಾರಗಳು ಶಿಕ್ಷಣ ಸಂಸ್ಥೆಗಳಿಗೆ ಪಾವತಿಸುತ್ತವೆ. ಪಿಯು ಇಲಾಖೆ ಒಂದಕ್ಕೆ ಪ್ರತಿ ವರ್ಷ ಸುಮಾರು 5 ಸಾವಿರ ಅಂಕಪಟ್ಟಿಗಳು ಪರಿಶೀಲನೆಗೆ ಬರಲಿದೆ.
    ಈ ಸೂಚನೆಯನ್ನು ಎಲ್ಲ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಆಡಳಿತಕ್ಕೆ ಒಳಪಡುವ ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕ ಉದ್ದಿಮೆಗಳು, ಆಯೋಗ, ನಿಗಮ, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net