ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಅವೈಜ್ಞಾನಿಕ ಕಲ್ಲು ಕ್ವಾರೆಯಿಂದ ಪರಿಸರ ನಾಶವಾಗುತ್ತಿದ್ದು, ಕಾಡು ಪ್ರಾಣಿ ಮತ್ತು ಪಕ್ಷಿಗಳು ಸಾವನ್ನಪ್ಪುವುದಲ್ಲದೆ ಜನರ ಸಾವಿಗೂ ಕಾರಣವಾಗಿರುವ ಕ್ವಾರೆಯ ವಿರುದ್ದ ಗ್ರಾಮಸ್ಥರು ಹಲವು ಭಾರಿ ದೂರು ನೀಡಿದರೂ ಸಂಬAದಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳದೆ ಸಾರ್ವಜನಿಕರ ಆಕ್ರೋಶಕ್ಕೆ ಕಲ್ಲು ಕ್ವಾರೆ ಗುರಿಯಾಗಿದೆ.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಬಳಿಯಿರುವ ಬೆಟ್ಟದಲ್ಲಿ ಖಾಸಗಿ ವ್ಯಕ್ತಿಗಳು ಕಲ್ಲು ಕ್ವಾರೆಯನ್ನು ಸ್ಥಾಪಿಸಿದ್ದು, ಇದರಿಂದ ಕಲ್ಲುಗಳನ್ನು ತೆಗೆಯಲು ಬಳಸುವ ಸಿಡಿ ಮದ್ದುಗಳ ಶಬ್ದಕ್ಕೆ ಕಾಡಿನಲ್ಲಿ ವಾಸಿಸುವ ಕಾಡು ಪ್ರಾಣಿ ಮತ್ತು ಪಕ್ಷಿಗಳು ಸಾವನ್ನಪ್ಪುತ್ತಿವೆ. ಕಲ್ಲು ಕ್ವಾರೆ ನಡೆಸಲಾಗುತ್ತಿರುವ ಬೆಟ್ಟದಿಂದ ಕೂಗಳತೆ ದೂರದಲ್ಲಿ ಎನ್.ಜಿ.ಒ ಸಂಸ್ಥೆಯೊAದು ಆನೆಗಳನ್ನು ಸಂರಕ್ಷಿಸಿ ಪೋಷಿಸುವ ಧಾಮವನ್ನು ಪ್ರಾರಂಭಿಸಿದ್ದು, ಅಲ್ಲಿ ಹತ್ತಾರು ಆನೆಗಳನ್ನು ರಕ್ಷಿಸಲಾಗಿದ್ದು, ಕ್ವಾರೆಯಲ್ಲಿ ಸಿಡಿಸುವ ಸಿಡಿಮದ್ದುಗಳ ಶಬ್ದಕ್ಕೆ ಆನೆಗಳು ಬೆದರಿ ಭಯದಲ್ಲಿ ವಾಸಿಸುತ್ತಿವೆ ಎನ್ನಲಾಗುತ್ತಿದೆ.
ಬೆಟ್ಟದ ಸುತ್ತ ಮುತ್ತಲೂ ಕೃಷಿ ಭೂಮಿಯಿದ್ದು, ಬಹುತೇಕ ರೈತರು ಬೋರ್ ವೆಲ್ ಮೂಲಕ ನೀರೆತ್ತಿ ವ್ಯವಸಾಯ ಮಾಡುತ್ತಿದ್ದಾರೆ. ಆದರೆ ಕ್ವಾರೆಯವರು ಕಲ್ಲು ತೆಗೆಯಲು ಭಾರಿ ಪ್ರಮಾಣದ ಸ್ಪೋಟಕಗಳನ್ನು ಬಳಸಿ ಭೂಮಿಯ ಒಳಗೆ ಸ್ಪೋಟಿಸುವುದರಿಂದ ಆ ಭಯಾನಕ ಶಬ್ದಕ್ಕೆ ರೈತರ ಬೋರ್‌ವೆಲ್‌ಗಳಲ್ಲಿ ಮೋಟಾರ್ ಮತ್ತು ಪೈಪ್‌ಗಳು ಬೋರ್‌ವೆಲ್ ಒಳಗೆ ಬೀಳುತ್ತಿದ್ದು, ಈ ಬಗ್ಗೆ ಸಂಬAದಪಟ್ಟ ಅಧಿಕಾರಿಗಳಿಗೆ ಹಲವು ಭಾರಿ ಮಾಹಿತಿ ನೀಡಿದ್ದರು ಯಾರೂ ಸಹ ತಲೆ ಕೆಡಿಸಿಕೊಂಡಿಲ್ಲ ಎಂಬುದು ಅರಾಭಿಕೊತ್ತನೂರು ಗ್ರಾಮಸ್ಥರ ಆರೋಪವಾಗಿದೆ.
ಅವೈಜ್ಞಾನಿಕ ಕ್ವಾರೆಗಳಲ್ಲಿ ಜನರ ಸರಣಿ ಸಾವು :
ಬೆಟ್ಟದ ಮೇಲೆ ಅವೈಜ್ಞಾನಿಕವಾಗಿ ನೂರಾರು ಅಡಿ ಆಳಕ್ಕೆ ಬಂಡೆಯನ್ನು ಕೊರೆದಿದ್ದು, ಮಳೆ ಬಂದರೆ ಮಳೆಯ ನೀರು ಕ್ವಾರೆಯಲ್ಲಿ ತುಂಬಿಕೊAಡು ಬೆಂಗಳೂರಿನಿAದ ಪ್ರವಾಸಿಗರು ಆ ನೀರಿನಲ್ಲಿ ಈಜಾಡಲು ಬಂದು ಅನೇಕ ಜನ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಬಳ್ಳಾರಿ ಮೂಲದ ವೈದ್ಯಕೀಯ ವಿದ್ಯಾರ್ಥಿಯೊಬ್ಬಳು ಕ್ವಾರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗೆ ಹಲವಾರು ಆತ್ಮಹತ್ಯೆ ಪ್ರಕರಣಗಳು ಆ ಕ್ವಾರೆಯಲ್ಲಿ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ.
ರೈತರ ಬೆಳೆ ನಾಶ
ಬೆಟ್ಟದ ಮೇಲೆ ಕಲ್ಲು ಮತ್ತು ಕಲ್ಲಿನ ಉತ್ಪನ್ನಗಳನ್ನು ಬೃಹತ್ ಲಾರಿಗಳಲ್ಲಿ ರೈತರ ಜಮೀನುಗಳ ಮದ್ಯೆ ಸಾಗಿಸುವುದರಿಂದ ಅದರಿಂದ ಬರುವ ಕಲುಷಿತ ಧೂಳು ರೈತರ ಬೆಳೆಗಳ ಮೇಲೆ ಬೀಳುವುದರಿಂದ ರೈತರ ಬೆಳೆಗಳು ನಾಶವಾಗುತ್ತಿದ್ದು, ರೈತರು ಹಲವಾರು ಭಾರಿ ಎಚ್ಚರಿಕೆ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಕೋಟ್
ಅರಾಭಿಕೊತ್ತನೂರು ಗ್ರಾಮದ ಬಳಿಯ ಬೆಟ್ಟದಲ್ಲಿ ಅವೈಜ್ಞಾನಿಕವಾಗಿ ಕಲ್ಲಿನ ಕ್ವಾರೆ ಪ್ರಾರಂಭಿಸಿದ್ದು, ಗ್ರಾಮ ಪಂಚಾಯಿತಿ ವತಿಯಿಂದ ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ನಡೆಸಲಾಗುತ್ತಿದ್ದು, ಇದರಿಂದ ಬೆಟ್ಟದ ಸುತ್ತಮುತ್ತಲಿನ ದೊಡ್ಡ ಅಯ್ಯೂರು, ಅರಾಭಿಕೊತ್ತನೂರು ಗ್ರಾಮಸ್ಥರಿಗೆ ತೀವ್ರ ತೊಂದರೆಗಳು ಆಗುತ್ತಿವೆ. ಇದರ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಆದರೆ ಜನರಿಗೆ ತೀವ್ರ ಸಂಕಷ್ಟಕ್ಕೆ ಕಾರಣವಾಗಿರುವ ಕ್ವಾರೆಯನ್ನು ಅಧಿಕಾರಿಗಳು ನಿಲ್ಲಿಸಬೇಕಿದೆ.
-ವೈ.ಮುನಿಯಪ್ಪ, ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯರು, ಜಿಲ್ಲಾಪಂಚಾಯ್ತಿ, ಕೋಲಾರ.
ಕೋಟ್
ಅರಾಭಿಕೊತ್ತನೂರು ಗ್ರಾಮಕ್ಕೆ ಸುತ್ತಲೂ ಬೆಟ್ಟಗಳು ಸುತ್ತುವರೆದಿದ್ದು, ಸುಂದರ ಪರಿಸರದಲ್ಲಿ ಗ್ರಾಮವಿದೆ. ಅರಾಬಿಕೊತ್ತನೂರು ಮತ್ತು ದೊಡ್ಡ ಅಯ್ಯೂರು ಮದ್ಯೆ ಇರುವ ಬೆಟ್ಟ ಒಂದು ರೀತಿಯಲ್ಲಿ ಅಂಜನಾದ್ರಿ ಬೆಟ್ಟ ಎಂದು ಕರೆಯಲ್ಪಡುತ್ತದೆ. ಅಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವೂ ಇದೆ. ಕಾಡು ಪ್ರಾಣಿಗಳು, ಪಕ್ಷಿಗಳು ವಾಸ ಮಾಡುತ್ತಿದ್ದು, ಅಂತಹ ಬೆಟ್ಟದಲ್ಲಿ ಕಲ್ಲು ಕ್ವಾರೆ ಸ್ಥಾಪಿಸಲು ಮುಂದಾದಾಗ ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡಲಾಯಿತು. ಆದರೆ ಸ್ಥಳೀಯ ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿ ನಮಗೆ ಮಾನಸಿಕವಾಗಿ ತೊಂದರೆ ಕೊಟ್ಟಿದ್ದಾರೆ. ಅಲ್ಲಿ ಅವೈಜ್ಞಾನಿಕವಾಗಿ ಕಲ್ಲು ಕ್ವಾರೆ ನಡೆಯುತ್ತಿರುವುದು ಸತ್ಯ ಆದರೆ ನಾನು ಸಾಮಾನ್ಯ ನಾದ ಕಾರಣ ಇದರ ವಿರುದ್ದ ಹೋರಾಟ ಮಾಡಲು ಆಗಲಿಲ್ಲ. ಆದ್ದರಿಂದ ಸುಮ್ಮನಿದ್ದೇನೆ, ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳು ಕೇವಲ ಹಣಕ್ಕೆ ಮಾತ್ರ ಸೀಮಿತವಾಗಿದ್ದು, ಜನಪರ ಕೆಲಸಗಳಿಗೆ ಅವರು ಕೈಗೆ ಸಿಗುವುದಿಲ್ಲ. ಇಂತಹ ಭ್ರಷ್ಟ ವ್ಯವಸ್ಥೆಯಲ್ಲಿ ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಿರುವುದು ನನಗೆ ತುಂಬಾ ನೋವಾಗುತ್ತಿದೆ.
-ಹೆಸರು ಹೇಳಲು ಇಚ್ಛಿಸದ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಸದಸ್ಯ
ಅರಾಭಿಕೊತ್ತನೂರು ಪಿಡಿಓ ಮತ್ತು ಡಿಎಫ್‌ಓ ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.
ಚಿತ್ರ ೦೭ ಕೆ.ಎಲ್.ಆರ್. ೦೪ : ವೈ.ಮುನಿಯಪ್ಪ, ಜೀವವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯರು, ಜಿಲ್ಲಾಪಂಚಾಯ್ತಿ, ಕೋಲಾರ
ಚಿತ್ರ ೦೭ ಕೆ.ಎಲ್.ಆರ್. ೦೪ಎ : ಅರಾಭಿಕೊತ್ತನೂರು ಬೆಟ್ಟದ ಕಲ್ಲು ಗಣಿಗಾರಿಕೆಗಾಗಿ ಬೆಟ್ಟವನ್ನು ಕೊರೆದಿರುವ ಚಿತ್ರಗಳು.