

ಚಿತ್ರದುರ್ಗ: ಜನರ ಬಹು ವರ್ಷಗಳ ಕನಸು ಕೊನೆಗೂ ಈಡೇರುವ ಹಂತಕ್ಕೆ ಬಂದಿದ್ದು, ನಗರಾಭಿವೃದ್ಧಿ ಪ್ರಾಧಿಕಾರದ 9 ಕೋಟಿ ರೂ. ಅನುದಾನದೊಂದಿಗೆ ಅರಸನಕೆರೆಯನ್ನು ಜನಾಕರ್ಷಣೆ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ಮುರುಘಾ ಮಠ ಎದುರಿನ ಕೆರೆ ಅಭಿವೃದ್ಧಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಮೂರ‌್ನಾಲ್ಕು ವರ್ಷಗಳ ಹಿಂದೆಯೇ ಅನುದಾನ ಮೀಸಲಿಡಲಾಗಿತ್ತು. ಆದರೆ, ತಾಂತ್ರಿಕ ಅನುಮತಿ, ಟೆಂಡರ್ ಮತ್ತಿತರ ಕಾರಣಗಳಿಂದ ವಿಳಂಬವಾಗಿತ್ತು. ಈಗ ಕಾಮಗಾರಿಯನ್ನು ಆರಂಭಿಸಲಾಗುತ್ತಿದೆ ಎಂದರು.
ಮೀನು ಹರಾಜು ಗುತ್ತಿಗೆದಾರ ಕೋರ್ಟ್‌ಗೆ ಹೋಗಿದ್ದರಿಂದಲೂ ತೊಡಕಾಗಿತ್ತು. ಆತನ ಗುತ್ತಿಗೆ ಅವಧಿ ಈಗ ಪೂರ್ಣಗೊಂಡಿದ್ದು, ಗುತ್ತಿಗೆದಾರ ಮತ್ತೆ ಇಲ್ಲಿ ಮೀನು ಹಿಡಿಯುವ ಪ್ರಯತ್ನ ನಡೆಸಿದರೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕೆರೆ ನೀರನ್ನು ಮಠದ ಹಿಂದಿನ ಕೆರೆಗೆ ಲಿಫ್ಟ್ ಮಾಡಿ, ಮತ್ತೆ ತುಂಬಿಸಲಾಗುವುದು. ಇಲ್ಲಿ ಶಾಶ್ವತವಾಗಿ ನೀರು ಇರುವಂತೆ ನೋಡಿಕೊಳ್ಳಲಾಗುವುದು ಎಂದರು. ಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆಗಳಿಗೆ ನೀರುವ ತುಂಬಿಸುವ ಕಾರ್ಯಕ್ರಮದಡಿ ಕ್ಷೇತ್ರದ 10 ಕೆರೆಗಳನ್ನು ಕೈಬಿಡಲಾಗಿತ್ತು.
ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಮಠದ ಎದುರು-ಹಿಂದಿನ ಕೆರೆಗಳ ಸಹಿತ 11 ಕೆರೆಗಳಿಗೆ ನೀರು ತುಂಬಿಸಲು ಆದೇಶವಾಗಿದೆ. ಭದ್ರಾದಿಂದ ನೀರು ಪೂರೈಕೆ ಸಮಸ್ಯೆ ಎದುರಾದರೆ ಸೂಳೆಕೆರೆಯಿಂದ ನೀರು ಹರಿಸಲಾಗುವುದು ಎಂದು ಹೇಳಿದರು.
ಗೋನೂರು ಹಾಗೂ ಮಲ್ಲಾಪುರ ಕೆರೆಗಳ ಅಭಿವೃದ್ಧಿಗೆ ಬೇಡಿಕೆ ಇದ್ದು, ಅದನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಕುಡಾ ಅಧ್ಯಕ್ಷ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ಆಯುಕ್ತ ಸೋಮಶೇಖರ್, ಸದಸ್ಯರಾದ ವಿ.ಆರ್.ನಾಗರಾಜ್, ರೇಖಾ, ಉಷಾಬಾಯಿ, ಎಂ.ಕೆ.ಹಟ್ಟಿ ಗ್ರಾಪಂ ಅಧ್ಯಕ್ಷೆ ಗೀತಮ್ಮ, ಸದಸ್ಯರಾದ ರತ್ನಮ್ಮ, ನಿಂಗಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯ ಹರೀಶ್ ಇದ್ದರು.
*ಯಾವೆಲ್ಲ ಕಾಮಗಾರಿಗಳು?
ಕೆರೆ ಹೂಳೆತ್ತುವುದು, ತೂಬು, ಕಾಲುವೆ ದುರಸ್ತಿ ಹಾಗೂ ಮೂರು ಕಡೆ ಚೈನ್ ಫೆನ್ಸಿಂಗ್, ರೇಲಿಂಗ್ ಅಳವಡಿಕೆ, ಬೋರ್‌ವೆಲ್, ಫೌಂಟೆನ್, ವಾಕಿಂಗ್‌ಪಾಥ್, ಲ್ಯಾಂಡ್‌ಸ್ಕೇಪಿಂಗ್, ಮಕ್ಕಳ ಆಟ, ಜಿಮ್ ಉಪಕರಣಗಳ ಅಳವಡಿಕೆ, ಪರಗೋಲ, ಶೌಚಗೃಹ, ಸೆಕ್ಯೂರಿಟಿ ಕೊಠಡಿ ನಿರ್ಮಾಣ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳೊಂದಿಗೆ ಈ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ನಗರಾಭಿವೃದ್ಧಿ ಪ್ರಾಧಿಕಾರ ಹೊಂದಿದೆ.