ಅರಣ್ಯದಲ್ಲಿ ಬೆಕ್‌ಡ್ಯಾಂ ನಿರ್ಮಾಣ

HUN-JUNE-28-2
ಹುಣಸೂರು ತಾಲೂಕು ಪ್ರಾದೇಶಿಕ ಅರಣ್ಯ ವಿಭಾಗದ ಕಲ್‌ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಇಲಾಖೆಯಿಂದ ನಿರ್ಮಿಸಿರುವ ಚೆಕ್‌ಡ್ಯಾಂಗಳು.
Published on

ಹುಣಸೂರು: ಬೇಸಿಗೆ ಸಮಯದಲ್ಲಿ ವನ್ಯಪ್ರಾಣಿಗಳಿಗೆ ಕುಡಿಯುವ ನೀರು ಅಲ್ಲಲ್ಲಿ ಸಿಗುವಂತಾಗಲು ಮತ್ತು ತೇವಾಂಶ ಕಾಪಾಡಿಕೊಳ್ಳುವ ಉದ್ದೇಶದಿಂದ ಅರಣ್ಯ ಪ್ರದೇಶದ ಅಲ್ಲಲ್ಲಿ ಚೆಕ್‌ಡ್ಯಾಂಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ.

ಅರಣ್ಯ ಇಲಾಖೆ ಪ್ರಾದೇಶಿಕ ವಿಭಾಗದ ಹುಣಸೂರು ವಲಯ ವ್ಯಾಪ್ತಿಯಲ್ಲಿ ಪ್ರಥಮ ಹಂತವಾಗಿ ಚೆಕ್‌ಡ್ಯಾಂಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆ 20-25 ಸ್ಥಳಗಳನ್ನು ಗುರುತಿಸಿದ್ದು, ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳುವ ಮೂಲಕ ಯೋಜನೆ ಜಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಿದೆ.

ಏನಿದು ಚೆಕ್‌ಡ್ಯಾಂ? : ಅರಣ್ಯ ಪ್ರದೇಶದಲ್ಲಿ ಮಳೆಗಾಲದಲ್ಲಿ ಸುರಿದ ಮಳೆ ಕೆಲವೊಮ್ಮೆ ಶೇಖರಣೆಯಾಗದೆ ಪೋಲಾಗಿ ಅಕ್ಕಪಕ್ಕದ ನದಿಗಳ ಒಡಲನ್ನು ಸೇರುತ್ತದೆ ಅಥವಾ ಜನವಸತಿ ಪ್ರದೇಶಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತದೆ. ಇತ್ತೀಚಿನ ದಶಕಗಳಲ್ಲಿ ಮಳೆ ಪ್ರಮಾಣವೂ ಕುಗ್ಗಿ, ನೀರಿನ ಸೆಲೆಯೂ ಬತ್ತಿ ಹೋಗಿದ್ದು, ವನ್ಯಪ್ರಾಣಿಗಳೂ ಬೇಸಿಗೆ ಕಾಲದಲ್ಲಿ ನೀರಿಗಾಗಿ ಪರದಾಡುವ ಮತ್ತು ನಾಡಿನೊಳಗೆ ದಾಂಗುಡಿಯಿಡುವ ಪ್ರವೃತ್ತಿ ಹೆಚ್ಚಿವೆ. ಆಹಾರಕ್ಕಾಗಿ ಮಾನವ-ವನ್ಯಜೀವಿ ಸಂಘರ್ಷ ದಿನೇ ದಿನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಾಡಿನಲ್ಲಿ ಬಿದ್ದ ಮಳೆಯನ್ನು ಅಲ್ಲೇ ಶೇಖರಿಸಿಟ್ಟು ವನ್ಯಪ್ರಾಣಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ.

ಹೇಗಿರುತ್ತದೆ?: ಆಯ್ದ ಸ್ಥಳಗಳಲ್ಲಿ ಚೆಕ್‌ಡ್ಯಾಂಗಳ ನಿರ್ಮಾಣ ಕಾರ್ಯ ನಡೆಯಲಿದ್ದು, ಪ್ರತಿ ಚೆಕ್‌ಡ್ಯಾಂ 15-20 ಮೀಟರ್ ಉದ್ದ ಮತ್ತು 2 ಮೀಟರ್ ಎತ್ತರ ಹೊಂದಿರುತ್ತದೆ. ಮಳೆನೀರು, ಪ್ರವಾಹದಂತಹ ಪರಿಸ್ಥಿತಿಯಲ್ಲೂ ಡ್ಯಾಂಗಳು ಕೊರೆತಕ್ಕೆ ಒಳಗಾಗದಂತೆ ಭದ್ರವಾಗಿ ನಿರ್ಮಾಣ ಮಾಡಲಾಗುತ್ತದೆ. ಡ್ಯಾಂಗಳ ಗುಣಮಟ್ಟ, ರೂಪುರೇಷೆಗಳನ್ನು ನರೇಗಾ ಇಂಜಿನಿಯರ್‌ಗಳೇ ನಿರ್ಧರಿಸುತ್ತಾರೆ. ಒಂದು ಚೆಕ್ ಡ್ಯಾಂ ನಿರ್ಮಾಣಕ್ಕೆ ಅಂದಾಜು 4-5ಲಕ್ಷ ರೂ.ವೆಚ್ಚ ತಗುಲಲಿದೆ ಎಂದು ಪ್ರಾದೇಶಿಕ ವಿಭಾಗದ ಹುಣಸೂರು ವಲಯದ ವಲಯ ಅರಣ್ಯಾಧಿಕಾರಿ ಎಚ್.ವಿ.ನಂದಕುಮಾರ್ ತಿಳಿಸುತ್ತಾರೆ.

ಹುಣಸೂರು ವಲಯ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ?: ಹುಣಸೂರು ವಲಯ ವ್ಯಾಪ್ತಿಯ ಕಲ್‌ಬೆಟ್ಟ ಭಾಗದಲ್ಲಿ 171 ಹೆಕ್ಟೇರ್ ಪ್ರದೇಶ, ಮುತ್ತುರಾಯನಹೊಸಳ್ಳಿ 527 ಹೆಕ್ಟೇರ್, ಕೊಳಗಟ್ಟ 79 ಹೆ., ಯಲಚನಹಳ್ಳಿ 39 ಹೆ. ಮತ್ತು ಗೊಮ್ಮಟಗಿರಿ 33 ಹೆಕ್ಟೇರ್ ಪ್ರದೇಶದಲ್ಲಿ ಒಟ್ಟು 20-25 ಚೆಕ್‌ಡ್ಯಾಂಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

ಜಿಐಎಸ್ ಪದ್ಧತಿ ಅನುಸರಣೆ: ಯಾವ ಜಾಗದಲ್ಲಿ ಚೆಕ್‌ಡ್ಯಾಂಗಳ ನಿರ್ಮಾಣವನ್ನು ಅರಣ್ಯ ಇಲಾಖೆ ನಿರ್ಧರಿಸುವುದಿಲ್ಲ. ನರೇಗಾ ಯೋಜನೆಯಡಿ ಕಾರ್ಯಕ್ರಮ ಜಾರಿಗೊಳ್ಳುವುದರಿಂದ ಅರಣ್ಯ ಇಲಾಖೆ ತನ್ನ ಕ್ರಿಯಾಯೋಜನೆಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ ನಂತರ ನರೇಗಾ ಇಂಜಿನಿಯರುಗಳು, ತಾಂತ್ರಿಕ ತಜ್ಞರು ಡ್ಯಾಂಗಳ ನಿರ್ಮಾಣದ ಉದ್ದೇಶ ಹೊಂದಿರುವ ಸ್ಥಳಗಳಿಗೆ ಭೇಟಿ ನೀಡಿ ಸ್ಯಾಟ್‌ಲೈಟ್ ತಂತ್ರಜ್ಞಾನ ಮೂಲಕ ಜಿಯೋಗ್ರಾಫಿಕ್ ಇನ್‌ಫಾರ‌್ಮೇಷನ್ ಸಿಸ್ಟಂ (ಜಿಐಎಸ್) ಅನುಸರಿಸಿ ಸ್ಥಳವನ್ನು ನಿಗದಿಪಡಿಸುತ್ತಾರೆ.

ಡ್ಯಾಂ ನಿರ್ಮಾಣ ಸ್ಥಳದ ಮಣ್ಣಿನ ಗುಣ, ಭೂಮಿಯ ಮೇಲ್ಪದರಗಳ ಗುಣಲಕ್ಷಣ, 100 ವರ್ಷಗಳ ಹಿಂದೆ ಈ ಭೂಮಿಯಿದ್ದ ಪರಿಸ್ಥಿತಿ, ಈಗಿನ ಪರಿಸ್ಥಿತಿ, ಈ ಭೂಮಿ ನೀರನ್ನು ಹಿಡಿದಿಟ್ಟುಕೊಳ್ಳಬಹುದೇ, ಇಲ್ಲವೇ, ಕಾಡಂಚಿನ ಭಾಗವಾದಲ್ಲಿ ಅಕ್ಕಪಕ್ಕದ ರೈತರ ಜಮೀನಿನ ಅಂತರ್ಜಲ ಮಟ್ಟ ಏರಿಕೆಯ ಪ್ರಯೋಜನ ಸಿಗಬಹುದೇ ಇಂತಹ ಎಲ್ಲ ವಿಷಯಗಳನ್ನು ಗಮನಿಸುತ್ತಾರೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಮನು ತಿಳಿಸುತ್ತಾರೆ.
ಅತಿವೃಷ್ಟಿಯಾದಲ್ಲಿ ನೀರಿನ ಅರಿವು ಸರಾಗವಾಗಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಸೂಚಿಸಲಿದ್ದಾರೆ. ನರೇಗಾ ಯೋಜನೆಯಡಿ ಆಯಾ ಗ್ರಾಮ ಪಂಚಾಯಿತಿಗಳಿಗೆ ಜಾಬ್‌ಕಾರ್ಡ್ ಮಾಡಿಕೊಡುವ ಜವಾಬ್ದಾರಿ ಹೊಂದಿರುತ್ತಾರೆ. ಇಂಜಿನಿಯರುಗಳ ಮೇಲ್ವಿಚಾರಣೆಯಲ್ಲಿ ಡ್ಯಾಂ ನಿರ್ಮಾಣವಾಗಲಿದೆ.

ಕಾಡಿನಲ್ಲಿ ವನ್ಯಜೀವಿಗಳ ಬಾಯಾರಿಕೆ ನೀಗಿಸುವ ಮತ್ತು ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಇದಾಗಿದೆ. ಕಾಡಂಚಿನ ಪ್ರದೇಶದ ರೈತರಿಗೂ ಅನುಕೂಲವಾಗಲಿದೆ. ಮಾನವ ವನ್ಯಜೀವಿ ಸಂಘರ್ಷ ತಡೆಯ ಕಡೆಗೂ ಸಹಾಯವಾಗಲಿದೆ. ತಜ್ಞರ ಅಭಿಪ್ರಾಯದಂತೆ ಸ್ಥಳ ನಿರ್ಧರಿಸಿ ಕ್ರಮವಹಿಸಲಾಗುವುದು.
ಸೀಮಾ ರಂಜನ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಪ್ರಾದೇಶಿಕ ವಿಭಾಗ, ಹುಣಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net