

ಕಳಸ: ಅರಣ್ಯ ಹಕ್ಕುಪತ್ರ ಪಡೆದವರಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕಳಸ ತಾಲೂಕು ಗಿರಿಜನ ಗೌಡಲು ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ವ್ಯಾಪ್ತಿಯಲ್ಲಿ ವಾಸವಾಗಿರುವ ಶೇ.90ರಷ್ಟು ಗಿರಿಜನರು ಅರಣ್ಯಹಕ್ಕು ಕಾಯ್ದೆ 2006ರ ಅಡಿಯಲ್ಲಿ ಹಕ್ಕುಪತ್ರ ಹೊಂದಿದ್ದು ಈ ಅರಣ್ಯ ಹಕ್ಕುಪತ್ರ ಹೊಂದಿದವರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಮುಂದೆ ದೊರೆಯಬಹುದಾದ ಸೌಲಭ್ಯಗಳನ್ನು ಪಡೆಯಲು ಅರಣ್ಯ ಹಕ್ಕುಪತ್ರ ಹೊಂದಿರುವ ಹೆಚ್ಚಿನ ರೈತರು ತಮ್ಮ ಜಮೀನಿನಲ್ಲಿ ಕಾಫಿ, ಅಡಕೆ, ಕಾಳುಮೆಣಸು, ಏಲಕ್ಕಿ ಬೆಳೆಗಳನ್ನು ಬೆಳೆಯುತ್ತಿದ್ದು ರೈತರಿಗೆ ಬೆಳೆ ದೃಢೀಕರಣ ಪತ್ರ ನೀಡಬೇಕು ಎಂದು ಮನವಿ ಮಾಡಿದರು.
ಅರಣ್ಯಹಕ್ಕು ಪತ್ರ ಹೊಂದಿರುವ ಕುಟುಂಬದ ಮುಖ್ಯಸ್ಥರು ಮರಣ ಹೊಂದಿರುವ ಸಂದರ್ಭದಲ್ಲಿ ಕುಟುಂಬದ ಇತರ ಲಾನುಭವಿಗಳ ಹೆಸರನ್ನು ಪಹಣಿಯ ಕಲಂ 11ರಲ್ಲಿ ನಮೂದಿಸಬೇಕು. ಅರಣ್ಯಹಕ್ಕು ಪತ್ರ ಹೊಂದಿರುವ ಲಾನುಭವಿಗಳ ಹೆಸರು ಫ್ರೂಟ್ ಐಡಿಯಲ್ಲಿ ನಮೂದಾಗಿದ್ದು ತೋಟಗಾರಿಕೆ ಇಲಾಖೆಯಿಂದ ಲಾನುಭವಿ ಹೊಂದಿರುವ ಜಮೀನಿನ ವಿಸ್ತೀರ್ಣವನ್ನು ಅನುಮೋದಿಸಿ ಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಕಳಸ ತಾಲೂಕು ಗಿರಿಜನ ಗೌಡಲು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅನಿಲ್ ಮುಜೇಕಾನು, ಕಾರ್ಯದರ್ಶಿ ಗಣೇಶ್ ಕುಕ್ಕೋಡು, ನಿರ್ದೇಶಕರಾದ ಸತೀಶ್ ಒಡ್ಡಿಕಟ್ಟೆ, ದಿನೇಶ್ ಎಸ್.ಕೆ.ಮೇಗಲ್, ಸುರೇಶ್ ಕೆರ್ನಾಳಿ, ಶ್ರೀನಿವಾಸ್ ಕೆರ್ನಾಳಿ, ಮೇಘಾನಂದ ಬೇಡಕ್ಕಿ ಇದ್ದರು.