ಅರಣ್ಯ ಸಿಬ್ಬಂದಿಗೆ ಆಹಾರ, ಅಪಾಯ ಭತ್ಯೆ: ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಮಾಹಿತಿ

20
Published on

ಹಗಲಿರುಳೆನ್ನದೆ, ಚಳಿ, ಮಳೆ ಗಾಳಿಯನ್ನು ಲೆಕ್ಕಿಸದೆ ಅರಣ್ಯ ಮತ್ತು ಅರಣ್ಯ ಸಂಪತ್ತು ಕಾಯುವ ಸಿಬ್ಬಂದಿಗೆ ವೇತನದ ಜತೆಗೆ ಆಹಾರಭತ್ಯೆ ನೀಡಲು ಮತ್ತು ಹೆಚ್ಚುವರಿಯಾಗಿ ಮಾಸಿಕ 2 ಸಾವಿರ ರೂ. ಅಪಾಯ ಭತ್ಯೆ (ರಿಸ್ಕ್ ಅಲೊಯನ್ಸ್) ನೀಡಲು ನಾನು ಸಚಿವರಾದ ಬಳಿಕ ಆದೇಶ ನೀಡಿದ್ದು, ಅದನ್ನು ಕಾರ್ಯಗತಗೊಳಿಸಲಾಗುತ್ತಿದೆ ಎಂದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ನಗರದ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೈಗಾರಿಕೆ ಇಲಾಖೆ ವ್ಯಾಪ್ತಿಯ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಸಾಂಸ್ಥಿಕ ಜವಾಬ್ದಾರಿ ನೆರವಿನಿಂದ ಮೈಸೂರು ವಿಭಾಗದ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗೆ ಸುರಕ್ಷತಾ ಕಿಟ್ ವಿತರಿಸಿ ಮಾತನಾಡಿದರು.

ಕಳೆದ 2 ವರ್ಷದಲ್ಲಿ 15 ಸಾವಿರ ಎಕರೆ ಜಮೀನನ್ನು ಹೊಸದಾಗಿ ಅರಣ್ಯ ಪ್ರದೇಶ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಬೆಂಗಳೂರಿನಲ್ಲಿ 4 ಸಾವಿರ ಕೋಟಿ ರೂ. ಬೆಲೆ ಬಾಳುವ 128 ಎಕರೆ ಸೇರಿದಂತೆ ರಾಜ್ಯದಾದ್ಯಂತ ಸಾವಿರಾರು ಕೋಟಿ ರೂ. ಬೆಲೆ ಬಾಳುವ 6 ಸಾವಿರ ಎಕರೆಗೂ ಹೆಚ್ಚು ಅರಣ್ಯ ಒತ್ತುವರಿ ತೆರವು ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

2023-24 ಮತ್ತು 2024-25ನೇ ಸಾಲಿನಲ್ಲಿ ಒಟ್ಟು 1,20,975 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು, 25 ಹೊಸ ವೃಕ್ಷೋದ್ಯಾನ ಮತ್ತು 35 ದೇವರ ಕಾಡು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಅರಣ್ಯ, ವನ್ಯಜೀವಿ ಸಂರಕ್ಷಣೆ ಮತ್ತು ಹಸಿರು ಸಂವರ್ಧನೆಯಲ್ಲಿ ಇಲಾಖೆಯ ಮುಂಚೂಣಿ ಸಿಬ್ಬಂದಿ ಪಾತ್ರ ಹಿರಿದು. ಅವರೆಲ್ಲರ ಶ್ರಮದಿಂದಲೇ ಇಂದು ರಾಜ್ಯದಲ್ಲಿ ಶೇ.21ರಷ್ಟು ಅರಣ್ಯ ಉಳಿದಿದೆ ಎಂದರೂ ತಪ್ಪಾಗಲಾರದು ಎಂದರು.

ಇಂದು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಿಂದ ಒಂದು ತಿಂಗಳಲ್ಲಿ ಬೀಳಬೇಕಾದ ಮಳೆ ಒಂದೇ ವಾರದಲ್ಲಿ ಬೀಳುತ್ತಿದೆ. ಒಂದು ವಾರದ ಮಳೆ ಒಂದು ದಿನ ಬೀಳುತ್ತಿದ್ದು, ಅನಾಹುತ ಸೃಷ್ಟಿಸುತ್ತಿದೆ. ಹೀಗಾಗಿ ನಾವು ಹಸಿರು ಪ್ರದೇಶ ಹೆಚ್ಚಳಕ್ಕೆ ಒತ್ತುನೀಡಬೇಕು, ಮರ ಬೆಳೆಸಬೇಕು ಎಂದರು.

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕ ಡಿ.ರವಿಶಂಕರ್, ಕೆಎಸ್‌ಡಿಎಲ್ ಅಧ್ಯಕ್ಷ ನಾಡಗೌಡ, ಮುಖ್ಯ ವನ್ಯಜೀವಿ ಪರಿಪಾಲಕರು ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಲ್ಕಡೆ, ಎಪಿಸಿಸಿಎಫ್ ಕುಮಾರ್ ಪುಷ್ಕರ್, ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net